ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆಯಲು ಮುಂದಾಗಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನವೊಲಿಕೆಯ ಪ್ರಯತ್ನವನ್ನು ಸಿದ್ದರಾಮಯ್ಯ ಮುಂದುವರೆಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ನಾಯಕ ಸಿ.ಎಂ.ಇಬ್ರಾಹಿಂರನ್ನು ಹೇಗಾದರೂ ಮಾಡಿ, ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಂದು ತಮ್ಮ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಇಬ್ರಾಹಿಂ ನಿವಾಸಕ್ಕೆ ಕಳುಹಿಸಿಕೊಟ್ಟು, ಈ ಕುರಿತ ಕೆಲಸ ನಡೆಸಿದ್ದಾರೆ.
3 ರಿಂದ 4 ದಿನಗಳ ಹಿಂದೆ ವಿಧಾನಸಭೆಯ ಲಾಂಜ್ ಬಳಿ ಸಿಎಂ ಇಬ್ರಾಹಿಂ ಭೇಟಿ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 'ಏಯ್ 31ಕ್ಕೆ ಮನೆಗೆ ಬರ್ತೀನಿ ಎಂದು ಹೇಳಿಲ್ವಾ? ಸುಮ್ಮನಿರು ಆತುರ ಬಿದ್ದು ನಿರ್ಧಾರ ತಗೊಬೇಡ. ಬೇರೆ ಯೋಚನೆ ಮಾಡಬೇಡ' ಎಂದು ಹೇಳಿದ್ದರು. ಇದೀಗ ಸಿಎಂ ಇಬ್ರಾಹಿಂರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಮಾತುಕತೆ ನಡೆಸುವಂತೆ ಜಮೀರ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸೂಚನೆಯ ಬೆನ್ನಲ್ಲೇ ಇಬ್ರಾಹಿಂ ನಿವಾಸಕ್ಕೆ ಆಗಮಿಸಿರುವ ಜಮೀರ್ ಅಹಮದ್ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಜೆಡಿಎಸ್ ಪಕ್ಷ ಸೇರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮುಂದೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ತಮಗೆ ಪ್ರಮುಖ ಸ್ಥಾನಮಾನ ನೀಡಲಾಗುತ್ತದೆ. ಆತುರದ ನಿರ್ಧಾರಕ್ಕೆ ಬಂದು ಜೆಡಿಎಸ್ ಸೇರ್ಪಡೆಯಾಗಿ ರಾಜಕೀಯದಲ್ಲಿ ತೆರೆಮರೆಗೆ ಸರಿಯಬೇಡಿ. ಜೆಡಿಎಸ್ ಒಂದು ಕುಟುಂಬ ರಾಜಕಾರಣದ ಪಕ್ಷವಾಗಿದ್ದು, ಅಲ್ಲಿ ನಿಮಗೆ ಹೆಚ್ಚು ದಿನ ಉತ್ತಮ ಸ್ಥಾನಮಾನ ಸಿಗುವುದಿಲ್ಲ. ದಯವಿಟ್ಟು ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಬಿಡಿ ಎಂದು ಒತ್ತಾಯಿಸಿದ್ದಾರೆ.
ರಾಜೀನಾಮೆ ನಿರ್ಧಾರ ಪ್ರಕಟ: ಕಳೆದ ವಾರವಷ್ಟೇ ತಮ್ಮ ಸದಸ್ಯತ್ವಕ್ಕೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿರುವ ಇಬ್ರಾಹಿಂ ಇದುವರೆಗೂ ರಾಜೀನಾಮೆ ಪತ್ರವನ್ನು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗಾಗಲಿ ಅಥವಾ ಪಕ್ಷದ ಯಾವುದೇ ನಾಯಕರಿಗೆ ಸಲ್ಲಿಸಿಲ್ಲ. ವಿಧಾನಪರಿಷತ್ ಶಾಸಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿರುವ ಇಬ್ರಾಹಿಂ ಇವೆರಡಕ್ಕೂ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆ ಆಗುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಪದ್ಮಶ್ರೀ ಗೌರವ ಸಲ್ಲಬೇಕು: ಸಿದ್ದರಾಮಯ್ಯ ಆಗ್ರಹ
ಇನ್ನೂ ಮೂರ್ನಾಲ್ಕು ವರ್ಷ ವಿಧಾನಪರಿಷತ್ ಸದಸ್ಯರಾಗಿ ಮುಂದುವರಿಯುವ ಅವಕಾಶ ಇರುವ ಸಿಎಂ ಇಬ್ರಾಹಿಂಗೆ ಮುಂದೆ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನವನ್ನು ನೀಡುವ ಭರವಸೆಯನ್ನು ಸಹ ಸಿದ್ದರಾಮಯ್ಯ ನೀಡುವ ಸಾಧ್ಯತೆ ಇದೆ. ಅಲ್ಪಸಂಖ್ಯಾತ ಮುಸಲ್ಮಾನ್ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಸಿಎಂ ಇಬ್ರಾಹಿಂ ಪಕ್ಷದಲ್ಲೇ ಉಳಿದರೆ ತಮಗೆ ಅನುಕೂಲ ಎಂಬ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದಾರೆ.