ಬೆಂಗಳೂರು : ಭೋಜನ ವಿರಾಮದ ಬಳಿಕ ಕಲಾಪ ಪ್ರಾರಂಭದಲ್ಲಿಯೇ ಬಿಜೆಪಿ ಶಾಸಕ ಸಿ.ಟಿ. ರವಿ, ಅಲ್ಲಿರುವವರು ಬನ್ನಿ, ಉತ್ತಮ ಅವಕಾಶ ನಾವು ನೀಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡರಿಗೆ ಆಹ್ವಾನ ನೀಡಿದರು.
ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಸೇರಿ ಎಲ್ಲರನ್ನೂ ಹೇಗೆ ಕರೆದೊಯ್ದಿರಿ. ಆಗ ಇಲ್ಲದ ನೈತಿಕತೆ ಈಗ ಹೇಗೆ ಬರುತ್ತದೆ ಎಂದು ಸಿ.ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶಿಸದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು, ಅವರನ್ನು ಸರ್ಕಾರ ಬೀಳಿಸಿ ಕರೆದೊಯ್ಯಲಿಲ್ಲ. ನಿಮ್ಮಂತೆ ಅವರು ಮಾಡಲಿಲ್ಲ ಬಿಡಪ್ಪ ಎಂದು ಸಿ.ಟಿ. ರವಿಗೆ ಟಾಂಗ್ ನೀಡಿದರು.
ಮುಂದುವರೆದು ಮಾತನಾಟಿದ ಸಿ.ಟಿ.ರವಿ, ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ. ಆಗ ಬೈಯ್ದವರು, ಈಗ ಹೊಗಳೋಕೆ ಹೋಗ್ತಿರಲ್ಲ ಎಂದಾಗ, ನಾನು ಡಿಸಿಎಂ ಆಗಿದ್ದೆ. ಜೆಡಿಎಸ್ನಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಧರ್ಮಸಿಂಗ್ ಡಿಸಿಎಂ ಸ್ಥಾನದಿಂದ ಉಚ್ಛಾಟಿಸಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡಿ. ಸುಮ್ನೆ ಕೂತ್ಕೋಳಪ್ಪ ಎಂದು ಸಿದ್ದರಾಮಯ್ಯ ಸಿ.ಟಿ.ರವಿಗೆ ತಿರುಗೇಟು ನೀಡಿದರು.
ಇದರ ನಡುವೆ ಮಾತನಾಡಿದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಆತ್ಮಸಾಕ್ಷಿ ನಮಗಿಲ್ಲ. ನಮ್ಮ ನಾಲ್ಕೈದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಅಂತಾರೆ. ಆಸೆ, ಆಮಿಷಗಳಿಗೆ ಒಳಗಾಗಿಲ್ಲವೆಂದು ಅಲ್ಲಿಂದಲೇ ಹೇಳುತ್ತಿದ್ದಾರೆ. ಯಾವುದೇ ಒತ್ತಡ ನಿಮಗಿಲ್ಲವಾದರೆ ಯಾಕೆ ಅಲ್ಲಿದ್ದೀರಾ? ಸ್ವಾಭಿಮಾನಿಗಳಾಗಿದ್ದರೆ ಕರ್ನಾಟಕದಲ್ಲಿಯೇ ಇರಬೇಕಿತ್ತು. ರಾಜ್ಯ ಬಿಟ್ಟು ಹೋಗುವಂತ ಪರಿಸ್ಥಿತಿ ಬಂದಿತ್ತಾ? ಈಗ ರಾಜ್ಯವನ್ನು ಹರಾಜು ಹಾಕಿದ್ದೀರಲ್ಲವೇ. ಇಲ್ಲಿ ನಿಮಗೆ ರಕ್ಷಣೆ, ಗೌರವ ಸಿಗುತ್ತಿರಲಿಲ್ಲವೇ, ಅಲ್ಲಿಗೆ ಹೋಗುವಷ್ಟು ಅರಾಜಕತೆ ಇಲ್ಲಿತ್ತಾ? ಎಂದು ಅತೃಪ್ತ ಶಾಸಕರಿಗೆ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್ಗೆ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.