ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದೂವರೆ ತಿಂಗಳು ಕಳೆದಿದ್ದರೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡದ ಬಿಜೆಪಿ ಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ ಪ್ರಥಮ ಬಜೆಟ್ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ. ಅಧಿವೇಶನ ಶುರುವಾಗುತ್ತಿದ್ದರೂ ರಾಜ್ಯದ ಅಧಿಕೃತ ಪ್ರತಿ ಪಕ್ಷವಾದ ಬಿಜೆಪಿ ಪ್ರತಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಒಂದು ಸೋಲು ಪ್ರತಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು ಬಿಜೆಪಿ ನಾಯಕರಿಗೆ ರೇಜಿಗೆ ಹುಟ್ಟಿಸಿದೆಯೇ? ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಸಬೇಕೇ? ಮುಖ್ಯಮಂತ್ರಿಯಂತೆ ಪ್ರತಿಪಕ್ಷ ನಾಯಕನ ಹುದ್ದೆಯೂ ಸಾಂವಿಧಾನಿಕ ಹುದ್ದೆ. ನಮ್ಮ ಸರ್ಕಾರದ ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿಯವರು, ಯಾರು ಸಿಎಂ? ಯಾವಾಗ ಮುಖ್ಯಮಂತ್ರಿ ಆಯ್ಕೆ ಎಂದು ರಚ್ಚೆ ಹಿಡಿದಿದ್ದರು. ನಮ್ಮಲ್ಲಿ ಸಿಎಂ ಆಯ್ಕೆಯೂ ಆಯಿತು. ಡಿಸಿಎಂ ಆಯ್ಕೆಯೂ ಆಯಿತು. ಪೂರ್ಣಪ್ರಮಾಣದ ಸಂಪುಟವೂ ಆಯಿತು. ಈಗ ನಾವು ಕೇಳುತ್ತಿದ್ದೇವೆ ಪ್ರತಿಪಕ್ಷ ನಾಯಕ ಯಾರು? ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷ ನಾಯಕನ ಹುದ್ದೆಗೆ ಮಹತ್ವದ ಸ್ಥಾನ : ಪ್ರತಿಪಕ್ಷ ನಾಯಕ ಯಾರಾಗಬೇಕೆಂಬುದು ಬಿಜೆಪಿಯ ಆಂತರಿಕ ವಿಚಾರ ಇರಬಹುದು. ಸಂವಿಧಾನದಲ್ಲಿ ಪ್ರತಿಪಕ್ಷ ನಾಯಕನ ಹುದ್ದೆಗೆ ಮಹತ್ವದ ಸ್ಥಾನವಿದೆ. ಯಾವುದೇ ಸರ್ಕಾರದ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವುದು ವಿಪಕ್ಷ ನಾಯಕನ ಕೆಲಸ. ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಇಲ್ಲಿ. ಬಿಜೆಪಿಯವರ ಒಳ ಜಗಳ ಏನೇ ಇರಲಿ. ಮೊದಲು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ ಎಂದು ಸಲಹೆ ಇತ್ತಿದ್ದಾರೆ.
ಜುಲೈ 3 ರಂದು ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಒತ್ತಡದಲ್ಲಿದೆ . ಇದು ಹೊಸ ರಾಜ್ಯ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಆದರೂ ಈ ಮುಂಭಾಗದಲ್ಲಿ ಸಮಯವಿದೆ. ಆದರೆ ಎರಡು ಶಿಬಿರಗಳ ನಡುವಿನ ಹೋರಾಟವು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ.

ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ತಯಾರಿ: ಸಿದ್ದರಾಮಯ್ಯ ಸರ್ಕಾರದ ಬಜೆಟ್ ಅಧಿವೇಶನ ಜುಲೈ 3 ರಿಂದ ಆರಂಭವಾಗಲಿದ್ದು, ಜುಲೈ 7 ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಜುಲೈ 3 ರಂದು ಆರಂಭವಾಗಲಿರುವ ಅಧಿವೇಶನ ಜುಲೈ 14 ರಂದು ಕೊನೆಗೊಳ್ಳಲಿದೆ. ಮೂಲಗಳ ಪ್ರಕಾರ, ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಆದರೆ, ಇದುವರೆಗೂ ಪ್ರತಿಪಕ್ಷ ನಾಯಕರು ಯಾರು ಎನ್ನುವುದೇ ಘೋಷಣೆಯಾಗಿಲ್ಲ. ನಾಳೆ ಬೆಳಗ್ಗೆ ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಸಮಯದೊಳಗೆ ಘೋಷಣೆ ಮಾಡಿಕೊಂಡರೂ ಸಮಸ್ಯೆ ಇಲ್ಲ. ಆದರೆ ಆಡಳಿತ ಪಕ್ಷದ ನಾಯಕರು ಕೇಳುವ ಪ್ರಶ್ನೆಗೆ ಉತ್ತರ ನೀಡಲಾಗದೇ ರಾಜ್ಯ ಬಿಜೆಪಿ ನಾಯಕರು ಹೈರಾಣಾಗುತ್ತಿದ್ದಾರೆ.

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ: ಬಸವರಾಜ ಬೊಮ್ಮಾಯಿ ಅವರೇ ಪ್ರತಿಪಕ್ಷ ನಾಯಕರಾಗಬಹುದು ಎಂಬ ಮಾತು ಕೇಳಿಬರುತ್ತಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎರಡು ಮೂರು ಮಂದಿ ಹಿರಿಯ ನಾಯಕರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಈ ಹಿನ್ನೆಲೆ ಬಿ. ಎಸ್ ಯಡಿಯೂರಪ್ಪ ಸಹ ಇಂದು ದೆಹಲಿಗೆ ತೆರಳಿದ್ದು, ಸಂಜೆಯ ವೇಳೆಗೆ ಪ್ರತಿಪಕ್ಷ ನಾಯಕರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ. ಆಡಳಿತ ಪಕ್ಷ ಕಾಂಗ್ರೆಸ್ ಈ ವಿಳಂಬವನ್ನೇ ಉತ್ತಮ ದಾಳವಾಗಿ ಬಳಸಿಕೊಂಡಿದೆ.
ಇದನ್ನೂ ಓದಿ: ಈ ವರ್ಷದ ಬಜೆಟ್ನಲ್ಲೇ ಎಲ್ಲಾ ಗ್ಯಾರಂಟಿ ಘೋಷಣೆಗಳಿಗೂ ಹಣ ಕೊಡುತ್ತೇನೆ: ಸಿಎಂ ಸಿದ್ದರಾಮಯ್ಯ