ಬೆಂಗಳೂರು: ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಕೊನೆಯವರೆಗೂ ಶ್ರಮಿಸಿದ್ದ ಮಹಾತ್ಮ ಗಾಂಧೀಜಿಯನ್ನು ಕೊಂದ ಮತಾಂಧ ನಾಥೂರಾಂ ಗೋಡ್ಸೆ ಅವರನ್ನು ಪೂಜಿಸುವವರು ಈ ದೇಶದಲ್ಲಿದ್ದು, ಇಂತಹವರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಗಾಂಧಿ ಜಯಂತಿ ಅಂಗವಾಗಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ 'ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ 2023'ರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಾಂಧೀಜಿಯವರ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿ, ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು. ಅಹಿಂಸಾ ಹಾದಿಯಲ್ಲಿ ನಡೆದು ದೇಶ ಸ್ವಾತಂತ್ರ್ಯ ಪಡೆಯಿತು. ಅವರು ದೊಡ್ಡ ಮಾನವತಾವಾದಿಯಾಗಿದ್ದರು. ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನದಿಂದ ನಾವೆಲ್ಲರೂ ಸಂಕಲ್ಪ ಮಾಡಬೇಕು. ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ಸರ್ಕಾರದ ಜನಪರ ಯೋಜನೆಗಳಿಗೆ ಗಾಂಧೀಜಿ ಚಿಂತನೆಗಳೇ ಪ್ರೇರಣೆ ಎಂದರು.
ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಸ್ವಾವಂಬನೆಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಮ್ಮ ದೇಶಕ್ಕೆ ದೊಡ್ಡ ಕೈಗಾರಿಕೆಗಳ ಬದಲು ಗುಡಿ ಕೈಗಾರಿಕೆಗಳು ಬರಬೇಕು. ಅವರು ಹೇಳಿದ ಪಂಚಾಯತ್ ರಾಜ್ ವ್ಯವಸ್ಥೆಯಂತೆ ಅಧಿಕಾರ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕೇ ಹೊರತು, ದಿಲ್ಲಿಯಿಂದ ಹಳ್ಳಿಗೆ ಬರಬಾರದು ಎಂದಿದ್ದರು. ಅಧಿಕಾರ ವಿಕೇಂದ್ರೀಕರಣ, ದೇಶ, ರಾಜ್ಯ, ಜಿಲ್ಲೆ, ಹಳ್ಳಿ ನಾಲ್ಕು ಹಂತದಲ್ಲಿ ಅಧಿಕಾರದ ವಿಕೇಂದ್ರೀಕರಣದಿಂದ ಜನರ ಪಾಲ್ಗೊಳ್ಳುವಿಕೆಯಿಂದ ಜನತಂತ್ರದ ವಿಕೇಂದ್ರೀಕರಣ ಸಾಧ್ಯ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿವರ ಚಿಂತನೆಗಳೇ ಪ್ರೇರಣೆ. ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದರು. ಮಹಿಳೆಯವರ ಅಭಿವೃದ್ಧಿಯಿಂದ ನಾಡು, ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅನ್ನಭಾಗ್ಯ ಯೋಜನೆಗೆ ಗಾಂಧಿ ತತ್ವಗಳನ್ನು ಅವಲಂಬಿಸಿವೆ ಎಂದು ಹೇಳಿದರು.
ಗಾಂಧೀಜಿಯವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ವಕೀಲ ವೃತ್ತಿಯಲ್ಲಿದ್ದ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧದಿಂದ ಅವಮಾನಿತರಾದರು. ಆ ದೇಶದಲ್ಲಿ ವರ್ಣಬೇಧದ ವಿರುದ್ಧ ಹೋರಾಟ ನಡೆಸಿದರು. ಗೋಪಾಲಕೃಷ್ಣ ಗೋಖಲೆ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಇವರ ಹೋರಾಟದ ಹಾದಿಯನ್ನು ನೋಡಿ, ಭಾರತದಲ್ಲಿನ ಬ್ರಿಟೀಷರ ದಾಸ್ಯದಿಂದ ತಪ್ಪಿಸಲು ಗಾಂಧೀಜಿಯವರು ನೇತೃತ್ವವನ್ನು ವಹಿಸಲು ಕೋರಿದರು. 1915 ರಲ್ಲಿ ಗಾಂಧೀಜಿ ಭಾರತಕ್ಕೆ ಬಂದರು. ಭಾರತದ ಸಮಾಜಿಕ ವ್ಯವಸ್ಥೆ, ಜನರ ಬದುಕನ್ನು ಅರಿಯಲು ರೈಲಿನಲ್ಲಿ 3ನೇ ದರ್ಜೆಯಲ್ಲಿಯೇ ಪ್ರಯಾಣ ಮಾಡಿ ಇಡೀ ಭಾರತವನ್ನು ಸುತ್ತಿದ್ದ ಅತ್ಯಂತ ಸರಳ ಜೀವಿ ಎಂದರು.
ಗರಗ ಕ್ಷೇತ್ರಿಯ ಸೇವಾ ಸಂಘ ಗಾಂಧಿ ಪ್ರಶಸ್ತಿ ಪ್ರದಾನ: 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ಗಾಂಧಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿ, ಗಾಂಧೀಜಿಯವರ ತತ್ವಾದರ್ಶಗಳ ಹಾದಿಯಲ್ಲಿ ನಡೆಯುವ ವ್ಯಕ್ತಿ ಅಥವಾ ಸಂಘಸಂಸ್ಥೆಗಳಿಗೆ ಗಾಂಧಿ ಪ್ರಶಸ್ತಿಯನ್ನು ನೀಡಬೇಕೆಂದು ಆದೇಶ ಹೊರಡಿಸಲಾಯಿತು. ಪ್ರಶಸ್ತಿಗೆ ಆರ್ಹರಾಗುವವರು ಗಾಂಧೀಜಿಯವರ ತತ್ವಗಳಲ್ಲಿ ನಂಬಿಕೆಯಿಟ್ಟವರಾಗಿರಬೇಕು. ಧಾರವಾಡದ ಗರಗ ಕ್ಷೇತ್ರಿಯ ಸೇವಾ ಸಂಘ ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಭಾರತದ ರಾಷ್ಟ್ರಧ್ವಜ ತಯಾರಾಗಿದ್ದಾರೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾದ ಈ ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ಪ್ರಶಸ್ತಿಯ ಆಯ್ಕೆ ಸಮಿತಿಗೆ ಧನ್ಯವಾದ ಅರ್ಪಿಸಿದರು.
ಗಾಂಧಿ ಪ್ರಶಸ್ತಿ ಪುರಸ್ಕಾರದ ಆಯ್ಕೆ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಎನ್.ಜಯರಾಮ್, ನಿರ್ದೇಶಕ ಹೇಮಂತ್ ನಿಂಬಾಳ್ಕರ್, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ: "ಕಾನೂನು ವಿರೋಧಿ ಕೃತ್ಯ ಎಸಗುವವರನ್ನು ಸಹಿಸುವುದಿಲ್ಲ": ಸಿಎಂ ಸಿದ್ದರಾಮಯ್ಯ ವಾರ್ನಿಂಗ್