ಬೆಂಗಳೂರು: ಕಳ್ಳತನವಾದ ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡಲೇಬೇಕು. ಕದ್ದ ವ್ಯಕ್ತಿ ನೀಡುವ ಮಾಹಿತಿ ಅನ್ವಯ ವಿಚಾರಣೆ ನಡೆಸುತ್ತೇವೆ. ಕದ್ದ ಚಿನ್ನ ರಿಕವರಿ ವಿಚಾರವಾಗಿ ನಗರ ಪೊಲೀಸರು ಯಾರಿಗೂ ಕಿರುಕುಳ ನೀಡಿಲ್ಲ. ಚಿನ್ನ ಬೆಳ್ಳಿ ಜಪ್ತಿ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮ ಅನುಸರಿಸಲಾಗುತ್ತಿದೆ. ನಿರ್ದಿಷ್ಟ ನಿಯಮ ಪಾಲಿಸದಿದ್ದವರಿಗೆ ಇಲಾಖೆ ನಿಯಮಾನುಸಾರ ಕ್ರಮ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ನಿಯಮ 72 ರ ಅಡಿ ಮಂಡಿಸಿದ ಸೂಚನೆಗೆ ಉತ್ತರಿಸಿ, ಪವರ್ ಲಾಲ್ ಎಂಬುವರಿಗೆ ಅನಗತ್ಯ ಕಿರುಕುಳ ನೀಡಿದ್ದು ತಪ್ಪು ಎಂದು ಹೇಳಲಾಗದು. ಕದ್ದ ಆಭರಣವನ್ನು ಖರೀದಿಸಿದ್ದು ಮೇಲ್ನೋಟಕ್ಕೆ ದೃಢಪಟ್ಟಿದೆ. ಕಳ್ಳತನ ಮಾಡಿದ ವ್ಯಕ್ತಿ ಆಭರಣ ನೀಡಿದ್ದನ್ನು ಒಪ್ಪಿದ್ದಾನೆ. ಅವನು ಕೊಟ್ಟ ಚಿನ್ನ ಕಳ್ಳತನದ್ದು ಎನ್ನುವುದು ಪವರ್ ಲಾಲ್ಗೆ ತಿಳಿದಿದೆ ಎಂಬ ಅರಿವಿದೆ ಎಂದಿದ್ದಾರೆ. ಅವರಿಗೆ ಎರಡು ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ನೀಡಿಲ್ಲ. ವಿಚಾರಣೆ ವೇಳೆ ಸಹಕರಿಸಿಲ್ಲ. ಆಗ ಅವರನ್ನು ನ್ಯಾಯಾಂಗದ ವಶಕ್ಕೆ ಪಡೆಯಲಾಗಿದೆ ಎಂದರು.
ಆದರೆ ಪೊಲೀಸರು ನಡೆದುಕೊಳ್ಳುವ ರೀತಿ ಸರಿಯಿಲ್ಲ. ಸಾಕಷ್ಟು ದೌರ್ಜನ್ಯ ಆಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಕಡೆ ಈ ರೀತಿ ಘಟನೆ ನಡೆಯುತ್ತಿದೆ. ಚಿನ್ನದ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ನಮ್ಮ ವ್ಯಾಪಾರಿಗಳು ತಮ್ಮಿಂದ ವಸೂಲಿಯಾದ ವಸ್ತುವಿನ, ಆಭರಣದ ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದ ಆಭರಣ ಏನಾಗಿದೆ ಎಂದು ಕೇಳಿದರು.
ಸಭಾಪತಿಗಳು ಮಧ್ಯ ಪ್ರವೇಶಿಸಿ, ಗೃಹ ಸಚಿವರೇ ಹುಬ್ಬಳ್ಳಿಯಲ್ಲೂ ಸಹ ಇಂತಹ ಘಟನೆ ನಡೆಯುತ್ತಿದೆ. ಸ್ವಲ್ಪ ಕ್ರಮ ಕೈಗೊಳ್ಳಿ ಎಂದರು. ಶರವಣ ಸಹ ಇಂತಹ ಕೃತ್ಯ ತಡೆಯಲು ಸೂಕ್ತ ಕಾನೂನು ತರಬೇಕು. ಸುಪ್ರೀಂ ಕೋರ್ಟ್ನಿಂದ ಇರುವ ನಿಯಮ ಪಾಲನೆ ಆಗಲಿ. ರೌಡಿಸಂ ನಿಲ್ಲಬೇಕು. ಸಣ್ಣಪುಟ್ಟ ಊರುಗಳಲ್ಲೂ ಇಂತಹ ಘಟನೆ ಆಗುತ್ತಿದೆ. ಸ್ವಾಭಿಮಾನಿ ವ್ಯಾಪಾರಿಗಳಿಗೆ, ಅಮಾಯಕರಿಗೆ ಅನ್ಯಾಯವಾಗುವುದು ಬೇಡ ಎಂದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದೆಲ್ಲೆಡೆ ನಡೆಯುತ್ತಿರುವ ದೌರ್ಜನ್ಯ ಕಡಿಮೆ ಆಗಬೇಕು. ಕಳ್ಳರು ಕೆಲವೊಮ್ಮೆ ಸುಳ್ಳು ಮಾಹಿತಿ ನೀಡುತ್ತಾರೆ. ಅಂತ ಸಂದರ್ಭ ವಿವೇಚನೆ ವಹಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಗೃಹ ಸಚಿವರು ಮಾತನಾಡಿ, ಎಲ್ಲೋ ಒಂದೆರಡು ಕಡೆ ಇಂತಹ ಘಟನೆ ನಡೆದಿರಬಹುದು. ದೂರು ಸಲ್ಲಿಕೆ ಆದಲ್ಲಿ ಪೊಲೀಸರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಆಭರಣ ಕಳೆದುಕೊಂಡವರ ಬಗೆಗೂ ನಾವು ಯೋಚಿಸಬೇಕು. ವ್ಯಾಪಾರಿಗಳು ಸಹ ಕಡಿಮೆ ಬೆಲೆಗೆ ಸಿಕ್ಕಾಗ ಕೊಂಡುಕೊಳ್ಳುತ್ತಾರೆ. ಮುಂದೆ ವ್ಯಾಪಾರಿಗಳ ವೃತ್ತಿ ಗೌರವ ಕಾಪಾಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತೇವೆ. ಅನಗತ್ಯವಾಗಿ ಪೊಲೀಸರ ಮೇಲೆ ಗೂಬೆ ಕೂರಿಸುವುದು ಬೇಡ. ನಿಯಮ ಅನುಸರಿಸಿ, ಬಲವಂತ ಮಾಡಬೇಡಿ ಎಂದು ಸೂಚಿಸುತ್ತೇವೆ ಎಂದರು.
ಇದನ್ನೂ ಓದಿ: ಸೈಬರ್ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ