ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ ಪಂಜರದ ಗಿಣಿಯಾಗಿರುವ ನಟಿ ರಾಗಿಣಿ ಜೈಲಿನಿಂದ ಹೊರಗೆ ಬರಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣ ರಾಗಿಣಿ ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್. ಹೌದು, A1 ಆರೋಪಿ ಶಿವಪ್ರಕಾಶ್ ಪರಾರಿಯಾಗಿರುವುದು ರಾಗಿಣಿ ಜಾಮೀನಿಗೆ ಸಂಕಷ್ಟ ತಂದೊಡ್ಡಿದೆ.
ಡ್ರಗ್ ಮಾಫಿಯಾ ಸಂಬಂಧ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ನಟಿ ರಾಗಿಣಿಯ ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್ @ ಚಿಪ್ಪಿ A1 ಆರೋಪಿಯಾಗಿದ್ದಾನೆ. ಈತ ಡ್ರಗ್ ಮಾಫಿಯಾ ಪ್ರಕರಣ ಬೆಳಕಿಗೆ ಬಂದು ಎಫ್ಐಆರ್ ಆಗುತ್ತಿದ್ದಂತೆ ಪರಾರಿ ಆಗಿದ್ದ. ಪ್ರಕರಣದಲ್ಲಿ ಪ್ರಮುಖ ಪಾತ್ರ ಹೊಂದಿದ್ದು, ಈತನ ವಿಚಾರಣೆ ಅಗತ್ಯವಿದೆ. ಶಿವಪ್ರಕಾಶ್ ತಲೆ ಮರೆಸಿಕೊಂಡಿರುವ ಕಾರಣ ಈಗಾಗಲೇ ಬಂಧಿತಳಾದ ರಾಗಿಣಿ ಜಾಮೀನು ಪಡೆಯಲು ಸಾಧ್ಯವಾಗಿಲ್ಲ.
ಬಂಧಿತಳಾದ ರಾಗಿಣಿಗೆ ಜಾಮೀನು ಸಿಕ್ಕಿದರೆ, ಸಾಕ್ಷಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಪ್ರಮುಖ ಆರೋಪಿ ಪತ್ತೆಯಾಗದೇ ಈಕೆಗೆ ಜಾಮೀನು ಕೊಟ್ಟರೆ ಸಾಕ್ಷಿ ನಾಶ ಮಾಡಬಹುದು ಎಂದು ಇನ್ನೂ ಜಾಮೀನು ಕೊಟ್ಟಿಲ್ಲ ಎನ್ನಲಾಗಿದೆ. ಪ್ರಕರಣ ಕೂಡ ತನಿಖೆ ಹಂತದಲ್ಲಿದ್ದು, ಶಿವಪ್ರಕಾಶ್, ಆದಿತ್ಯ ಆಳ್ವಾ ಸೇರಿ ಪ್ರಮುಖ ಆರೋಪಿಗಳ ಸುಳಿವು ಸಿಸಿಬಿಗೆ ಇನ್ನೂ ಕೂಡ ಸಿಕ್ಕಿಲ್ಲ. ಪ್ರಮುಖ ಆರೋಪಿಗಳು ಸಿಕ್ಕಿದ ನಂತರ ಮಾತ್ರ ತನಿಖೆ ಪೂರ್ಣಗೊಳ್ಳಲು ಸಾದ್ಯವಾಗುತ್ತೆ. ಅದಾದ ಬಳಿಕವಷ್ಟೇ ರಾಗಿಣಿ ಬೇಲ್ ವಿಚಾರದಲ್ಲಿ ಬದಲಾವಣೆಗಳಾಗಬಹುದು.