ಬೆಂಗಳೂರು: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿನ್ನೆ ರಾತ್ರಿ ನಿಧನರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಸೇರಿದಂತೆ ನೂರಾರು ಮಂದಿ ಅಗಲಿದ ಚೇತನದ ಅಂತಿಮ ದರ್ಶನ ಪಡೆದರು.
ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಪಡೆದು ಮಾತನಾಡಿ, ಸುಬ್ಬಣ್ಣನವರು ಸುಗಮ ಸಂಗೀತಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸದಾಕಾಲ ಲವಲವಿಕೆಯಿಂದಿದ್ದ ಅವರಿಗೆ ನನ್ನ ಜೊತೆ ಪ್ರೀತಿಯ ಸಂಬಂಧವಿತ್ತು ಎಂದು ಸ್ಮರಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಸುಬ್ಬಣ್ಣ ಗುರುತಿಸಿಕೊಂಡಿದ್ದರು. ಅವರ ಸಾವು ದುಃಖ ತಂದಿದೆ. ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವೂ ಆಗಿದೆ. ಸುಬ್ಬಣ್ಣನವರ ಸಾವಿನ ನೋವು ತಡೆಯುವ ಶಕ್ತಿಯನ್ನು ದೇವರು ಕುಟುಂಬಸ್ಥರಿಗೆ ನೀಡಲು ಎಂದರು.
ಶಿವಮೊಗ್ಗ ಸುಬ್ಬಣ್ಣನವರ ಸೊಸೆ ಅರ್ಚನಾ ಉಡುಪ ಮಾತನಾಡಿ, ನಮ್ಮ ಮಾವ ಕೊನೆವರೆಗೂ ಆರೋಗ್ಯವಾಗಿದ್ದರು. ನಿನ್ನೆ ಸ್ವಲ್ಪ ಉಸಿರಾಟದ ಸಮಸ್ಯೆ ಆಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ವಿ. ಆದ್ರೆ ಮಾರ್ಗಮಧ್ಯೆ ಅವರಿಗೆ ತೀವ್ರ ಹೃದಯಾಘಾತ ಉಂಟಾಯಿತು. ನಮ್ಮ ಕುಟುಂಬಕ್ಕೆ ಇದು ತುಂಬಲಾರದ ನಷ್ಟ. ನಮ್ಮದು ಋಗ್ವೇದ. ಅದರ ಪ್ರಕಾರ ವಿಧಿವಿಧಾನದಂತೆ ಮುಂದಿನ ಕಾರ್ಯ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರೇಜ್ ಸೇರಿದ ಆಂಬ್ಯುಲೆನ್ಸ್ಗಳು: ಪರದಾಡುತ್ತಿರುವ ರೋಗಿಗಳು