ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ 24 ಕೋವಿಡ್ ಸೋಂಕಿತರ ಸಾವು ಪ್ರಕರಣದ ತನಿಖೆ ನಡೆಸಿ, ವರದಿ ನೀಡಲು IAS ಅಧಿಕಾರಿ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.

ನಿನ್ನೆ ಬೆಳಗ್ಗೆ 9 ರಿಂದ ಇಂದು ಬೆಳಗ್ಗೆ 7 ಗಂಟೆಯವರೆಗೆ ಕೋವಿಡ್ ಸೋಂಕಿತ ಸುಮಾರು 24 ಮಂದಿ ಸಾವಿಗೆ ತುತ್ತಾಗಿದ್ದರು. ಈ ಸಾವಿನ ಹಿಂದೆ ಆಕ್ಸಿಜನ್ ಕೊರತೆಯ ಆರೋಪ ಕೇಳಿ ಬರುತ್ತಿದೆ.
ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೋವಿಡ್ ಸೋಂಕಿತರ ಸಾವಿಗೆ ಕಾರಣವಾದ ಹಿನ್ನೆಲೆಯನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದೆ.
ದುರ್ಘಟನೆಯ ಸಂಪೂರ್ಣ ತನಿಖೆ ನಡೆಸಿ, ಘಟನೆಗೆ ಕಾರಣ ಪತ್ತೆ ಹಚ್ಚಿ ತನಿಖಾ ವರದಿಯನ್ನು 3 ದಿನದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.