ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಇದುವರೆಗೂ ಘೋಷಿತವಾಗಿಲ್ಲ. ಆದರೆ ರಿಜ್ವಾನ್ ಆರ್ಷದ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ನಾಯಕರನ್ನು ಭೇಟಿ ಮಾಡಿದ ಶಿವಾಜಿನಗರ ಕ್ಷೇತ್ರದ ಕೈ ನಾಯಕರು, ರಿಜ್ವಾನ್ ಆರ್ಷದ್ಗೆ ಟಿಕೆಟ್ ನೀಡಿದ್ರೆ ನಾವು ಯಾರು ಕೆಲಸ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿ ವಾಪಸಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ಗೆ ಟಿಕೆಟ್ ನೀಡಿದರೆ ಶಿವಾಜಿನಗರದಲ್ಲಿ ಕಾಂಗ್ರೆಸ್ಗೆ ಸೋಲು ಖಚಿತ ಎಂಬ ಮಾಹಿತಿಯನ್ನು ಕೆಲ ಸ್ಥಳೀಯ ನಾಯಕರು ರಾಷ್ಟ್ರೀಯ ನಾಯಕರಿಗೆ ತಲುಪಿಸಿದ್ದಾರೆ. ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ನಾಯಕರು, ಐಎಂಎ ಹಗರಣದಲ್ಲಿ ರೋಷನ್ ಬೇಗ್ ಜೊತೆ ರಿಜ್ವಾನ್ ಆರ್ಷದ್ ಅವರ ಹೆಸರು ಕೂಡ ಕೇಳಿ ಬಂದಿದೆ. ಹಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತರಿದ್ದಾರೆ.
ಇನ್ನು 15 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, ಇದರಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಕಡೆಯ ವ್ಯಕ್ತಿಗಳೇ ಅಭ್ಯರ್ಥಿಗಳಾಗಿದ್ದಾರೆ. ಇಲ್ಲಿಯೂ ರಿಜ್ವಾನ್ ಆರ್ಷದ್ ಪರ ಸಿದ್ದರಾಮಯ್ಯ ನಿಂತಿದ್ದಾರೆ. ರಿಜ್ವಾನ್ ಆರ್ಷದ್ಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ. ಇದರಿಂದ ಈ ಸಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಶಿವಾಜಿನಗರ ಕ್ಷೇತ್ರದ ಮುಖಂಡರಿಂದ ಒತ್ತಾಯ ಕೇಳಿಬಂದಿದೆ.
ಈ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ವೇಣುಗೋಪಾಲ್ ಶಿವಾಜಿನಗರ ಮುಖಂಡರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.