ಕೆಆರ್‌ಪುರಂ : ಕೊರೊನಾದಿಂದ ಸಮಸ್ಯೆ ಎದುರಿಸಿ ತುತ್ತು ಅನ್ನಕ್ಕೀಗ ಸಂಕಷ್ಟ ಪಡುತ್ತಿರುವ ಸಾವಿರಾರು ಜನರಿಗೆ ಕೆಆರ್‌ಪುರದ ಭಟ್ಟರಹಳ್ಳಿ ಸಮೀಪದ ಶಿಶು ಮಂದಿರ ಸಂಸ್ಥೆ ರೇಷನ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಿಶುಮಂದಿರ ಸಂಸ್ಥೆಯು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ಮಿಕರು, ಮಂಗಳಮುಖಿಯರು, ಅಂಗವಿಕಲರು, ವಲಸೆ ಕಾರ್ಮಿಕರನ್ನು ಗುರುತಿಸಿ ರೇಷನ್ ಕಿಟ್ಗಳನ್ನು ನೀಡಿತ್ತಾ ಬಂದಿದೆ.
ಇವರ ಸಮಾಜ ಸೇವೆ ನೋಡಿ ಟೆಕ್ ಮಹೀಂದ್ರ ಸಂಸ್ಥೆ ಕಳೆದ ಆರು ತಿಂಗಳಿಂದ ಸುಮಾರು ಮೂವತ್ತು ಲಕ್ಷ ರೂಪಾಯಿಯ ಅಕ್ಕಿ, ಗೋಧಿ, ಧಾನ್ಯ, ಎಣ್ಣೆ ನೀಡಿತ್ತು. ಸೇವಾಮನೋಭಾವದಲ್ಲಿ ಪಡೆದ ಆಹಾರ ಪದಾರ್ಥಗಳನ್ನು ಶಿಶುಮಂದಿರ ಸಂಘಸಂಸ್ಥೆ ಬಡವರನ್ನು ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಇಂದು ವಿತರಿಸಿತು.
ಶಿಶು ಮಂದಿರ ಸಂಸ್ಥೆ ಇಂದಿನವರೆಗೆ 10 ಸಾವಿರಕ್ಕೂ ಹೆಚ್ಚು ಬಡ ಜನರಿಗೆ ಮೂಲಸೌಕರ್ಯ ಹಾಗೂ ಆಹಾರ ಪದಾರ್ಥಗಳನ್ನು ನೀಡಿ ಬಡವರ ಪಾಲಿಗೆ ಆಶಾಕಿರಣವಾಗಿದೆ. ಇಂದು ಕೆಆರ್‌ಪುರಂ ಕ್ಷೇತ್ರದ ಬಸವನಪುರ ವಾರ್ಡ್ನ ಸ್ವಾತಂತ್ರನಗರದ 500ಕ್ಕೂ ಹೆಚ್ಚು ಕುಟುಂಬದವರಿಗೆ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರು ರೇಷನ್ ಹಸ್ತಾಂತರಿಸಿದರು.
ಶಿಶುಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಕಳೆದ ಒಂದು ವಾರದಿಂದ ಕಿತ್ತಗನೂರು, ಕೆಆರ್‌ಪುರಂ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ, ಅಂಗವಿಕಲರನ್ನು ಮತ್ತು ಸ್ವತಂತ್ರನಗರದ ನೂರಾರು ಕಡುಬಡವರನ್ನು ಗುರುತಿಸಿ ಫುಡ್ ಕಿಟ್ ವಿತರಿಸಿದೆ. 10.ಕೆ.ಜಿ ಅಕ್ಕಿ, 5.ಕೆ.ಜಿ ಗೋಧಿ ಹಿಟ್ಟು, 2.ಕೆ.ಜಿ ತೊಗರಿಬೇಳೆ, 1ಲೀಟರ್ ಅಡುಗೆ ಎಣ್ಣೆ ಹೊಂದಿದ ಒಂದು ಸಾವಿರ ಕಿಟ್ಗಳನ್ನು ವಿತರಿಸಲಾಯಿತು.