ಶಿವಮೊಗ್ಗ: ತೆಲಂಗಾಣದ ಜೀತದಾಳುಗಳು ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿ ಪತ್ತೆಯಾಗಿದ್ದು, ಅವರ ರಕ್ಷಣೆ ಮಾಡಲಾಗಿದೆ.
ಸಾಗರ ತಾಲೂಕು ಯಡೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕಟ್ಟಡ ಕಾಮಗಾರಿಗೆ ತೆಲಂಗಾಣದಿಂದ ಜನರನ್ನು ಕರೆದುಕೊಂಡು ಬರಲಾಗಿತ್ತು. ಇವರೆಲ್ಲ ಲಾಕ್ಡೌನ್ ಮುಗಿದ ನಂತರ ಇಲ್ಲಿಗೆ ಆಗಮಿಸಿದ್ದರು. ಇವರನ್ನು ಹುನಿಯಾ ಹಾಗೂ ಈಶ್ವರಯ್ಯ ಎಂಬ ಗುತ್ತಿಗೆದಾರರು ಕರೆದುಕೊಂಡು ಬಂದಿದ್ದರು.
ತೆಲಂಗಾಣದಿಂದ ಮಕ್ಕಳು ಸೇರಿದಂತೆ 29 ಜನ ಜಿಲ್ಲೆಗೆ ಆಗಮಿಸಿದ್ದರು. ತೆಲಂಗಾಣದಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆ ಎನ್ಜಿಒ ಮೂಲಕ ಇಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಾಗರ ಉಪವಿಭಾಗಾಧಿಕಾರಿ ಪ್ರಸನ್ನ , ತಹಶೀಲ್ದಾರ್ ಚಂದ್ರಶೇಖರ ನಾಯ್ಕ. ಯಡೆಹಳ್ಳಿ ಪಿಡಿಒ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 29 ಜನರನ್ನು ರಕ್ಷಿಸಲಾಗಿದೆ.
ತೆಲಂಗಾಣದಿಂದ ಬಂದವರನ್ನು ಹೆಚ್ಚಿನ ಹಣ ನೀಡಿ ಕರೆದು ಕೊಂಡುಬರಲಾಗಿದೆ. ಇಲ್ಲಿ ಇವರಿಗೆ ಕನಿಷ್ಠ ಕೂಲಿ ನೀಡಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಸದ್ಯ ಈ ಎಲ್ಲರಿಗೂ ಸಾಗರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಆಶ್ರಯ ನೀಡಲಾಗಿದ್ದು, ಸಾಗರ ಉಪವಿಭಾಗಾಧಿಕಾರಿಗಳು ಇವರನ್ನು ತೆಲಂಗಾಣಕ್ಕೆ ಕಳುಹಿಸುವ ಪ್ರಯತ್ನದಲ್ಲಿದ್ದಾರೆ.