ಹೊಸಕೋಟೆ: ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅದೇ ಪಕ್ಷದ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಆಚರಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ.
ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಮತ್ತು ಹೊಸಕೋಟೆ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈಗ ತಾವೇ ಮುಂದೆ ನಿಂತು ಮುಂಬರುವ ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಗುರುವಾರ ಹೊಸಕೋಟೆಯಲ್ಲಿ ಆಯೋಜಿಸಿದ್ದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಮಾಡಬೇಡಿ ಎಂದು ಬಹಳ ಜನ ಹೇಳಿದರೂ, ಆದರೆ ನಾನು ಅವರ ಮಾತನ್ನು ಕೇಳುವುದಿಲ್ಲ. ಟಿಪ್ಪು ಜಯಂತಿ ಆಚರಣೆ ಮಾಡೇ ತೀರುತ್ತೇನೆ ಎಂದು ಹೇಳಿದ್ದಾರೆ.
ನನ್ನ ಗ್ರಾಮ ಬೆಂಡಿಗಾನಹಳ್ಳಿ ಪಕ್ಕದಲ್ಲಿರುವ ರಸನಹಳ್ಳಿಯಲ್ಲಿ ನಾನೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಿಸುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿಗೇ ಸವಾಲ್ ಹಾಕಿದ್ದಾರೆ.
ಹೊಸಕೋಟೆ ಶಾಸಕರಾಗಿದ್ದ ಎಂಟಿಬಿ ನಾಗರಾಜು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆ ಉಪಚುನಾವಣೆ ನಡೆಯಲಿದೆ. ಆದರೆ ಬಿಜೆಪಿ ನಾಯಕರು ಎಂಟಿಬಿ ನಾಗರಾಜ್ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದು, ಮುಸ್ಲಿಂ ವರ್ಗದ ಜನರ ಮತವನ್ನು ಸೆಳೆಯರು ಯೋಜನೆ ರೂಪಿಸಿದ್ದಾರೆ ಎನ್ನಲಾಗ್ತಿದೆ.