ಬೆಂಗಳೂರು : ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಗೆ ಸ್ಥಾಪಿಸಿದ ನಿಧಿಯ ಹಣವನ್ನು ದೋಚುವ ವ್ಯವಸ್ಥೆಯಿಂದ ಹೆಣ್ಣು ಮಕ್ಕಳ ಸುರಕ್ಷತೆ ಬಯಸಬಹುದೇ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರೇ ಕರ್ನಾಟಕವನ್ನು ಮತ್ತೊಂದು ಉತ್ತರಪ್ರದೇಶ ಮಾಡದಿರಿ. ಮಹಾನಗರಗಳ ಪ್ರಮುಖ ರಸ್ತೆ, ಅಡ್ಡರಸ್ತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ನಿಗಾ ವ್ಯವಸ್ಥೆ ರೂಪಿಸಲು ನಿರ್ಭಯಾ ಹೆಸರಿನಲ್ಲಿ ಸ್ಥಾಪನೆಯಾದ ಹಣವನ್ನು ನುಂಗಿ ಆ ಹೆಣ್ಣುಮಗಳಿಗೆ ಅವಮಾನ ಮಾಡಿದ್ದೀರಿ.
ಹೆಣ್ಣು ಮಕ್ಕಳ ಸುರಕ್ಷತೆ ಕ್ರಾಂತಿಯಾಗಬೇಕೆ ಹೊರತು, ಕ್ರೈಮ್ ನ್ಯೂಸ್ ಆಗಬಾರದು. ಈ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಕೇ? ನಿರ್ಭಯಾ ಆತ್ಮಕ್ಕೆ ಅವಮಾನವಾಗುತ್ತಿದ್ದರೂ ಗೃಹ ಸಚಿವ ಬೊಮ್ಮಾಯಿಯವರೇ ಎಲ್ಲಿದ್ದೀರಿ, ಮುಖ್ಯಮಂತ್ರಿ ಯಡಿಯೂರಪ್ಪನವರೇ ಮಾತನಾಡಿ ಎಂದು ಪ್ರಶ್ನಿಸಿದರು.