ಬೆಂಗಳೂರು: ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾದ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಹಲ್ಲೆಗೇರೆ ಶಂಕರ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತನ್ನನ್ನು ಕೊಲೆ ಮಾಡಲು ಮಗ ಮುಂದಾಗಿದ್ದ ಎಂಬ ವಿಚಾರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಸೆ.12ರಂದು ಮಗ ಮಧುಸಾಗರ್ ನನಗೆ ಕರೆ ಮಾಡಿದ್ದ. ಅಂದು ಮನೆಗೆ ಹೋಗಿದ್ದರೆ ಬಹುಶಃ ನಾನು ಕೊಲೆ ಆಗುತ್ತಿದ್ದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಸೆ.12ರಂದು ಅಪ್ಪ ಶಂಕರ್ಗೆ ಎರಡು, ಮೂರು ಬಾರಿ ಕರೆ ಮಾಡಿದ್ದರೂ ಕರೆ ಸ್ವೀಕರಿಸಲಿರಲಿಲ್ಲ. ಹೀಗಾಗಿ ಮೆಸೇಜ್ ಮಾಡಿ 10 ಲಕ್ಷ ಹಣ ಕೊಡುತ್ತೇನೆ ಬನ್ನಿ ಎಂದು ಮಧುಸಾಗರ್ ಹೇಳಿದ್ದ. ಅಂದು ಏನಾದರೂ ಮನೆಗೆ ಹೋಗಿದ್ದರೆ ಕೊಲೆಯಾಗುತ್ತಿದ್ದೆ ಎಂದು ಶಂಕರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆಗೇರೆ ಶಂಕರ್ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರ ಹೋಲಿಕೆಯಾಗಬಹುದು. ಆದರೆ ನಿರೂಪಿಸುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸೆ.17ರಂದು ಒಂದೇ ಕುಟುಂಬದ ಐವರ ದಾರುಣ ಸಾವು ಪ್ರಕರಣ ಬೆಳಕಿಗೆ ಬಂದಿತ್ತು. ದುರ್ಘಟನೆಯಲ್ಲಿ ಶಂಕರ್ ಪತ್ನಿ ಭಾರತಿ, ಮಕ್ಕಳಾದ ಸಿಂಚನಾ, ಸಿಂಧೂರಾಣಿ, ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡರೆ 9 ತಿಂಗಳ ಹಸುಗೂಸನ್ನು ಆಕೆಯ ತಾಯಿ ಸಿಂಧೂರಾಣಿಯೇ ಕೊಲೆ ಮಾಡಿದ್ದಳು. ಸಾವಿಗೂ ಮುನ್ನ ಮಕ್ಕಳು ಬರೆದಿದ್ದ ಡೆತ್ ನೋಟ್ನಲ್ಲಿ ಶಂಕರ್ ಹಾಗೂ ಅಳಿಯಂದಿರ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು.
ಕುಟುಂಬಸ್ಥರ ಆತ್ಮಹತ್ಯೆಗೆ ಪರೋಕ್ಷ ಪ್ರಚೋದನೆ ನೀಡಿರುವ ಆರೋಪದಡಿ ಶಂಕರ್ ಹಾಗೂ ಇಬ್ಬರು ಅಳಿಯಂದಿರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬಹ್ರೇನ್ನ ಮಾಜಿ ಅಧಿಕಾರಿ ಡ್ರಗ್ ಮಾಫಿಯಾದ ಕಿಂಗ್ಪಿನ್: ಎನ್‌ಸಿಬಿಯಿಂದ ಬೆಂಗಳೂರಿನಲ್ಲಿ ಬಂಧನ