ಬೆಂಗಳೂರು: ಪೊಲೀಸ್ ಇಲಾಖೆಯಿಂದ ನಿವೃತ್ತಿಯಾದ ಬಳಿಕ ರಾಜಕೀಯ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿರುವ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಇದೀಗ ಬಿಜೆಪಿಯಿಂದ ವಿಧಾನ ಪರಿಷತ್ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
![ಬಿಜೆಪಿಯಿಂದ ವಿಧಾನಪರಿಷತ್ ಟಿಕೆಟ್ಗಾಗಿ ಶಂಕರ್ ಬಿದರಿ ಸರ್ಕಸ್](https://etvbharatimages.akamaized.net/etvbharat/prod-images/kn-bng-12-shankar-bidari-cm-meet-script-7208080_03062020213357_0306f_03504_1063.jpg)
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದ ಶಂಕರ್ ಬಿದರಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಕೆಲ ಕಾಲ ಮಾತುಕತೆ ನಡೆಸಿದರು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ನಗರ ಪೊಲೀಸ್ ಆಯುಕ್ತ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆ ಅಲಂಕರಿಸಿದ್ದ ಬಿದರಿ, ಇದೀಗ ವಿಧಾನ ಪರಿಷತ್ ಟಿಕೆಟ್ಗಾಗಿ ಸಿಎಂ ಮುಂದೆ ಬೇಡಿಕೆ ಇರಿಸಿದ್ದಾರೆ. ಆದರೆ ಸಿಎಂ ಯಾವುದೇ ಭರವಸೆ, ಆಶ್ವಾಸನೆಯನ್ನು ನೀಡಿಲ್ಲ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಸಿಎಂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಬೇಡಿಕೆ ಇಡಲಾಯಿತು. ಒಕ್ಕೂಟದ ಪದಾಧಿಕಾರಿಗಳು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಸಿಎಂ ಭೇಟಿ ಮಾಡಿ, ರಾಜ್ಯಸಭೆ ಚುನಾವಣೆ ಅಥವಾ ವಿಧಾನ ಪರಿಷತ್ ಚುನಾವಣೆಯಲ್ಲಿ ಶಂಕರ್ ಬಿದರಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.