ಬೆಂಗಳೂರು: ಕಲುಷಿತ ನೀರಿನಿಂದಾಗಿ ನೊರೆ ಹಾಗೂ ಬೆಂಕಿಯ ಸಮಸ್ಯೆಯಿಂದ ಸುದ್ದಿಯಲ್ಲಿರುವ ಬೆಂಗಳೂರಿನ ವರ್ತೂರು ಕೆರೆ ಇದೀಗ ಮತ್ತೆ ಸುದ್ದಿಯಾಗಿದೆ. ಅದು ನೊರೆ ಅಥವಾ ಬೆಂಕಿ ಹೊತ್ತಿಕೊಂಡ ವಿಷಯಕ್ಕೆ ಅಲ್ಲ. ಶನೇಶ್ವರ ಸ್ವಾಮಿಯ ಕಲ್ಲಿನ ವಿಗ್ರಹ ಪತ್ತೆಯಾಗಿರುವ ವಿಚಾರಕ್ಕೆ.
ಹೌದು, ಪತ್ತೆಯಾದ ಶನೇಶ್ವರ ಸ್ವಾಮಿಯ ಕಲ್ಲಿನ ವಿಗ್ರಹ ಗಂಗರ ಕಾಲದ್ದು ಎನ್ನಲಾಗಿದ್ದು, ವರ್ತೂರು ಕೆರೆ ಅಂಗಳದಲ್ಲಿ ಪತ್ತೆಯಾಗಿದೆ. 2017ರಲ್ಲಿ ವರ್ತೂರು ಸೇತುವೆ ಶಿಥಿಲವಾಗಿದ್ದರಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇನ್ನೇನು ಅಂತಿಮ ಅಂತಕ್ಕೆ ಬಂದಿದೆ. ಕಳೆದ ರಾತ್ರಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುವಾಗ ಈ ವಿಗ್ರಹ ಪತ್ತೆಯಾಗಿದೆ.
ಹಲವು ವರ್ಷಗಳ ಹಿಂದೆ ವರ್ತೂರು ಕೆರೆ ಕಟ್ಟೆ ಪ್ರದೇಶಗಳಲ್ಲಿ ಗಂಗರ ಕಾಲದ ದೇವಾಲಯಗಳಿದ್ದು, 40 ವರ್ಷಗಳಿಂದಲು ಕೆರೆ ಪುನಶ್ಚೇತನ ಮಾಡದೆ ಇರುವುದರಿಂದ ಕೆರೆ ಅಂಗಳದಲ್ಲಿನ ದೇವಾಲಯದ ವಿಗ್ರಹ ಇರಬಹುದೆಂದು ಸ್ಥಳೀಯರು ಶಂಖೆ ವ್ಯಕ್ತಪಡಿಸಿದ್ದಾರೆ. ಬಿಡಿಎ ಹಾಗೂ ಇತಿಹಾಸ ತಜ್ಞರಿಗೆ ಮಾಹಿತಿ ನೀಡಿದ್ದು, ಅವರು ಪರಿಶೀಲನೆ ನಡೆಸಿದ ನಂತರ ಇದು ಯಾವ ಕಾಲದ ವಿಗ್ರಹವೆಂದು ತಿಳಿಯಬೇಕಿದೆ.
ವರ್ತೂರು ಕೆರೆ ಸೇತುವೆ ನಿರ್ಮಾಣ ವೇಳೆ ಶನೇಶ್ವರ ಸ್ವಾಮಿ ಕಲ್ಲಿನ ವಿಗ್ರಹ ದೊರೆತಿರುವುದು ಸ್ಥಳೀಯರಲ್ಲಿ ಒಂದು ರೀತಿಯ ಹರ್ಷ ಮೂಡಿಸಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಇದು ಯಾವ ಕಾಲದ ವಿಗ್ರಹವೆಂದು ಪತ್ತೆಹಚ್ಚಿ ಇತಿಹಾಸದ ಪುಟಗಳನ್ನು ತೆರೆಯುವಂತಹ ಕೆಲಸ ಮಾಡಬೇಕಿದೆ.ಇನ್ನು ಸ್ಥಳೀಯ ನಿವಾಸಿ ಜಗದೀಶ್ ರೆಡ್ಡಿ ಮಾತನಾಡಿ, ವರ್ತೂರು ಕೆರೆಯ ಕಾಮಗಾರಿ ನಡೆಯುತ್ತಿದ್ದು ಇಟ್ಟಾಚಿ ಯಂತ್ರದ ಮೂಲಕ ಸುಮಾರು ಇಪ್ಪತೈದು ಅಡಿಗಳಷ್ಟು ಆಳದಲ್ಲಿ ಮಣ್ಣು ತೆಗೆಯುವಾಗ ಹಳೆಯದಾದ ಪುರಾತನ ಕಾಲದ ಒಂದು ವಿಗ್ರಹ ಸಿಕ್ಕಿತು. ನಾವು ಬಿಡಿಎ ಹಾಗೂ ಪುರತತ್ವ ಇಲಾಖೆಯವರ ಗಮನಕ್ಕೆ ತಂದಿದ್ದೇವೆ. ನಾವು ಚಿಕ್ಕವರಾಗಿದ್ದಾಗ ಕೆರೆಯ ಸುತ್ತಮುತ್ತಲಿನಲ್ಲಿ ಸಣ್ಣ ಪುಟ್ಟ ಪುರಾವೆಗಳು ದೊರೆತಿದ್ದವು ಎಂದು ತಿಳಿಸಿದರು.