ಬೆಂಗಳೂರು: ಲೋಕಸಮರದ ಅಖಾಡಕ್ಕಿಳಿಯಲು ಶಾಮನೂರು ಶಿವಶಂಕರಪ್ಪ ಹಿಂದೇಟು ಹಾಕಿರುವ ಹಿನ್ನೆಲೆ ಕೈ ನಾಯಕರು ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಕಾರಣ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಶಾಮನೂರು ಕುಟುಂಬದವರು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಈಗಾಗಲೇ ಕುರುಬ ಸಮಾಜದ ಹೆಚ್.ಬಿ.ಮಂಜಪ್ಪ ಅವರ ಹೆಸರನ್ನು ಶಾಮನೂರು ಕುಟುಂಬ ಸೂಚಿಸಿದೆ.
ಆದ್ರೆ ಈಗಾಗಲೇ ಕುರುಬ ಸಮುದಾಯದ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಹಾಗಾಗಿ ದಾವಣಗೆರೆ ಲೋಕ ಅಖಾಡದಿಂದ ಲಿಂಗಾಯತ ಸಮುದಾಯದವರನ್ನು ಕಣಕ್ಕಿಳಿಸಲು ಚಿಂತನೆ ನಡೆಯುತ್ತಿದೆ. ಇತ್ತ ಅಭ್ಯರ್ಥಿ ಹುಡುಕಾಟದ ಬೆನ್ನಲ್ಲೇ ನಿಖಿಲ್ ಕೊಂಡಜ್ಜಿ ಹೆಸರು ಮುನ್ನೆಲೆಗೆ ಬಂದಿದೆ. ನಿಖಿಲ್ ಕೊಂಡಜ್ಜಿ, ಕೇಂದ್ರದ ಮಾಜಿ ಸಚಿವ ಬಸಪ್ಪ ಕೊಂಡಜ್ಜಿ ಮೊಮ್ಮಗರಾಗಿದ್ದು, ತೆರೆಮರೆಯಲ್ಲಿ ಟಿಕೆಟ್ಗಾಗಿ ಪ್ರಯತ್ನ ನಡೆಯುತ್ತಿದೆ. ಇದೇ ವಿಚಾರವಾಗಿ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಿಖಿಲ್ ಕೊಂಡಜ್ಜಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.