ಬೆಂಗಳೂರು: ಇಸ್ಲಾಂ ಧರ್ಮ ಮತ್ತು ಸೌದಿ ಅರೇಬಿಯಾದ ರಾಜನ ಕುರಿತಂತೆ ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ಪ್ರಕಟಿಸಿದ ಆರೋಪದಲ್ಲಿ ಸೌದಿ ಅರೇಬಿಯಾದ ನ್ಯಾಯಾಲಯದಿಂದ 15 ವರ್ಷ ಶಿಕ್ಷೆಗೆ ಗುರಿಯಾಗಿರುವ ಶೈಲೇಶ್ ಕುಮಾರ್ ಅವರ ಶಿಕ್ಷೆ ಬದಲಿಸುವಂತೆ ಸೌದಿ ರಾಜರ ಮುಂದೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕಾಗಿ ಶಿಕ್ಷೆ ವಿಧಿಸಿರುವ ಆದೇಶದ ಪ್ರತಿ ಮತ್ತದರ ದೃಢೀಕರಿಸಿರುವ ಆದೇಶದ ಪ್ರತಿ ಪಡೆದುಕೊಂಡು ನ್ಯಾಯಪೀಠದ ಮುಂದೆ ಹಾಜರಿ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶೈಲೇಶ್ ಪತ್ನಿ ಕವಿತಾ ಶೈಲೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ. ಜೊತೆಗೆ ಧರ್ಮ ನಿಂದನೆ, ವಿಶ್ವಾಸಘಾತುಕತನ ಅಥವಾ ದೇಶದ್ರೋಹ ಆರೋಪಗಳನ್ನು ಎದುರಿಸುತ್ತಿರುವ ಪ್ರಕರಣಗಳಲ್ಲಿ ಕ್ಷಮಾಧಾನ ಅರ್ಜಿ ಸಲ್ಲಿಸುವ ಕುರಿತ ಕಾರ್ಯವಿಧಾನವನ್ನು ತಿಳಿಸಿಕೊಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಇದೇ ವೇಳೆ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮೋಹಿನ್ ಖಾನ್ ಎಂಬುವರು ಆನ್ಲೈನ್ನಲ್ಲಿ ವಿಚಾರಣೆಗೆ ಭಾಗಿಯಾಗಿ ನ್ಯಾಯಪೀಠಕ್ಕೆ ವಿವರಣೆ ನೀಡಿದರು. ಶೈಲೇಶ್‌ಗೆ ಶಿಕ್ಷೆ ವಿಧಿಸಿರುವ ಆದೇಶದ ಪ್ರತಿ ಪಡೆದುಕೊಳ್ಳುವ ಸಂಬಂಧ ಈಗಾಗಲೇ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಆದರೆ, ಈವರೆಗೂ ಆದೇಶದ ಪ್ರತಿ ಸಿಕ್ಕಿಲ್ಲ. ಈ ಸಂಬಂಧ ಪ್ರಯತ್ನ ಮಾಡುತ್ತಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ನ್ಯಾಯಪೀಠ, ಆದೇಶ ಪ್ರತಿ ಪಡೆದುಕೊಳ್ಳುವುದಕ್ಕೆ ಇನ್ನೂ ಎಷ್ಟು ದಿನಗಳ ಕಾಲ ಅಗತ್ಯವಿದೆ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಅವರು, ಸೌದಿ ನ್ಯಾಯಾಲಯಗಳು ಆದೇಶದ ಪ್ರತಿಯನ್ನು ಶಿಕ್ಷೆಗೆ ಗುರಿಯಾದವರಿಗೆ ಮಾತ್ರ ನೀಡಬಹುದು. ಇತರರಿಗೆ ನೀಡುವ ಪರಿಪಾಠ ಇಲ್ಲ. ಆದರೂ, ಪ್ರಯತ್ನ ಮಾಡಲಾಗುತ್ತಿದೆ. ಎಷ್ಟು ದಿನಗಳಲ್ಲಿ ಸಿಗಲಿದೆ ಎಂದು ಹೇಳಲಾಗದು ಎಂದು ವಿವರಿಸಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ನಮ್ಮ ಪ್ರಜೆ ವಿದೇಶದಲ್ಲಿ ಸಿಲುಕಿದ್ದಾರೆ: ಈ ಹಿಂದೆ ನಡೆದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸಂಬಂಧ ಆರೋಪಿಸುವುದನ್ನು ಹೊರತುಪಡಿಸಿ, ವಿಶಾಲ ದೃಷ್ಠಿಕೋದಲ್ಲಿ ತನಿಖೆ ನಡೆಸಬೇಕು. ಮಾಹಿತಿ ತಂತ್ರಜ್ಞಾನದ ತಜ್ಞರ ನೆರವನ್ನು ಪಡೆದುಕೊಂಡು ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ, ವಿಚಾರಣೆ ವೇಳೆ ತನಿಖಾಧಿಕಾರಿಗಳು ಹಾಜರಿರಲಿಲ್ಲ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಭಾರತೀಯ ಪ್ರಜೆಯೊಬ್ಬರು ವಿದೇಶದಲ್ಲಿ ತೊಂದರೆಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳು ಏನು ಮಾಡಿದ್ದಾರೆ. ನಮ್ಮ ಪ್ರಜೆಯಾದರೂ ನಮ್ಮ ದೇಶಕ್ಕೆ ಹಿಂದಿರುಗಬೇಕು. ತನಿಖಾಧಿಕಾರಿಗಳು ತಾವು ನಡೆಸಿರುವ ತನಿಖೆಯ ಕುರಿತು ವಿವರಿಸಬೇಕು. ಈ ಹಿಂದೆ ನೀಡಿರುವ ಆದೇಶದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸೂಚನೆ ನೀಡಿತ್ತು.
ತನಿಖಾಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿ ನ್ಯಾಯಾಲಯಕ್ಕೆ ಗೈರು ಹಾಜರಾಗುವುದನ್ನು ಸಹಿಸಲಾಗದು. ಪ್ರಕರಣ ಸಂಬಂಧದ ಮುಂದುವರಿದ ತನಿಖೆ ಸಂಬಂಧ ಪ್ರಯತ್ನ ಮಾಡಿರುವ ಸಂಬಂಧ ವಿವರಣೆ ನೀಡಬೇಕು. ನ್ಯಾಯಾಲಯದ ಸೂಚನೆಯಿದ್ದರೂ ತನಿಖಾಧಿಕಾರಿ ಹಾಜರಾಗಿಲ್ಲ. ಇದೇ ತನಿಖಾಧಿಕಾರಿಯ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಆರ್ಎಸ್ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ಪೊಲೀಸರಿಗೆ ದೂರು