ಬೆಂಗಳೂರು: ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಾಲ್ಡೀವ್ಸ್ ಮೂಲದ ಅಕ್ರಂ ಅಹಮದ್ (51) ಬಂಧಿತ ಆರೋಪಿ. 33 ವರ್ಷದ ಗಗನಸಖಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ಧಾರೆ.
ಆಗಸ್ಟ್ 18ರಂದು ಮಾಲೆಯಿಂದ ಬೆಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಆರೋಪಿ, ಕ್ಯಾಬಿನ್ ಕ್ರೂ ಯುವತಿಯನ್ನ ಕರೆದು ಬಿಯರ್ ಹಾಗೂ ಗೋಡಂಬಿ ಕೇಳಿದ್ದ. ಸರ್ವ್ ಮಾಡುವ ಸಂದರ್ಭದಲ್ಲಿ 51 ವರ್ಷಗಳಿಂದಲೂ ನಿನ್ನಂತೆ ಇರುವ ಹುಡುಗಿಯನ್ನ ಹುಡುಕುತ್ತಿದ್ದೇನೆ. 10 ಡಾಲರ್ ಬದಲು 100 ಡಾಲರ್ ಕೊಡುತ್ತೇನೆ. ಉಳಿದ ಹಣ ನೀನೆ ಇಟ್ಟುಕೋ ಎಂದು ಆಕೆಯ ದೇಹವನ್ನ ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ಆರೋಪಿಸಲಾಗಿದೆ.
ಮತ್ತೋರ್ವ ಮಹಿಳಾ ಸಿಬ್ಬಂದಿ ಹಣ ಕೇಳಲು ಹೋದಾಗ ಆರೋಪಿಯು ಹಣ ಹುಡುಕುವ ನೆಪದಲ್ಲಿ ತನ್ನ ಪ್ಯಾಂಟ್ನೊಳಗೆ ಕೈ ಹಾಕಿಕೊಂಡು ಕೆಟ್ಟದಾಗಿ ವರ್ತಿಸಿದ್ದ ಎನ್ನಲಾಗಿದೆ. ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿಯೂ ಸಹ ಎರಡು ಮೂರು ಬಾರಿ ಆಸನದಿಂದ ಎದ್ದು ನಿಂತಿದ್ದು, ಕುಳಿತುಕೊಳ್ಳುವಂತೆ ಸೂಚಿಸಿದಾಗ 'ನನಗೆ ಒರಟು ವಸ್ತುಗಳು ಇಷ್ಟ, ನೀನು ತುಂಬಾ ಒರಟು'' ಎಂದು ಅಸಭ್ಯವಾಗಿ ವರ್ತಿಸಿದ್ದ ಎಂದು ನೊಂದ ಗಗನಸಖಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ. ಬ್ಯುಸಿನೆಸ್ ವೀಸಾದಲ್ಲಿ ಆರೋಪಿ ಭಾರತಕ್ಕೆ ಬಂದಿದ್ದ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಇತ್ತೀಚೆಗೆ ಗೋವಾದಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದ. ಆತನನ್ನು ದೆಹಲಿಯ ಭದ್ರತಾ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ಕುರಿತು ದೂರು ಸಲ್ಲಿಸಲಾಗಿದೆ. ಘಟನೆ ತನಿಖೆಯಲ್ಲಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದರು.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಪ್ರಯಾಣಿಕ ವಶಕ್ಕೆ
ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬಂಧನ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ಮತ್ತು ಮಲ ವಿಸರ್ಜನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ, ಏರ್ ಇಂಡಿಯಾ ವಿಮಾನದಲ್ಲಿ ರಾಮ್ ಸಿಂಗ್ ಎಂಬ ಪ್ರಯಾಣಿಕ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆ ಮಾಡಿದ್ದ. ಅಷ್ಟೇ ಅಲ್ಲ ಆತನ ಪ್ರಯಾಣದ ಉದ್ದಕ್ಕೂ ಉಗುಳುತ್ತಿದ್ದನು ಎಂದು ಹೇಳಲಾಗಿತ್ತು. ಈ ಘಟನೆ ವಿಮಾನ ಸಂಖ್ಯೆ AIC866ದಲ್ಲಿ ನಡೆದಿತ್ತು.
ಇದನ್ನೂ ಓದಿ: ವಿಮಾನದ ಪ್ರಯಾಣಿಕರ ಮಧ್ಯೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬಂಧನ