ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯರ ಮೇಲೆ ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಸಾಧನ ಮಹಿಳಾ ಸಂಘದ ಸದಸ್ಯರು ಮಹಿಳಾ ಆಯೋಗದ ಮುಂದೆ ಪ್ರತಿಭಟನೆ ನಡೆಸಿದರು.
ಲೈಂಗಿಕ ಕಾರ್ಯಕರ್ತೆಯರು ಮಹಿಳೆಯರು ಅಲ್ವಾ? ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಹೇಳ್ತಾ ಹೋದರೆ ಭಯಂಕರವಾಗಿದೆ. ನಮ್ಮನ್ನು ಮನುಷ್ಯರಾಗಿಯೂ ಕಾಣ್ತಿಲ್ಲ, ಕಂಡಲೆಲ್ಲ ಪೊಲೀಸರು ಹೊಡೆಯೋದು ಮಾಡ್ತಿದ್ದಾರೆ ಎಂದು ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹಲವು ಬಾರಿ ದೂರು, ಮನವಿಗಳನ್ನು ಸಲ್ಲಿಸಿದ್ದೇವೆ. ಆದರೂ ಲೈಂಗಿಕ ಕಾರ್ಯಕರ್ತೆಯರ ಮೇಲೆ ಪೊಲೀಸರು ದೌರ್ಜನ್ಯವೆಸಗುವುದು ನಿಂತಿಲ್ಲ. ಬೀದಿಯಿಂದ ಹೊಡೆದು ಗುಡಿಸಿ ಹಾಕಲು ನಾವೇನು ಕಸನಾ? ನಮಗ್ಯಾಕೆ ಬಿಎಂಟಿಸಿ ನಿಲ್ದಾಣಕ್ಕೆ ಪ್ರವೇಶವಿಲ್ಲ? ಪ್ರಜೆಗಳನ್ನು ರಕ್ಷಿಸುವುದು ಪೊಲೀಸರ ಕೆಲಸ, ಅವರನ್ನು ನೈತಿಕವಾಗಿ ಜಡ್ಜ್ ಮಾಡುವುದಲ್ಲ. ಲೈಂಗಿಕ ಕೆಲಸ ಕಾನೂನಿನಲ್ಲಿ ಅಪರಾಧವಲ್ಲ, ಆದರೆ ನಿಮ್ಮ ಮನಸ್ಸಿನಲ್ಲಿ ಅಪರಾಧ ಅಂತ ಇದೆ ಎಂದು ಬಿತ್ತಿ ಪತ್ರ ಹಿಡಿದು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಬಿದ್ದಿದ್ದ ಕನ್ನಡ ಬಾವುಟಗಳು.. ಹೋರಾಟಗಾರರ ಆಕ್ರೋಶ
ಈ ಬಗ್ಗೆ ಸಾಧನ ಸಮಾಜ ಸಂಘದ ಕಾರ್ಯದರ್ಶಿ ಗೀತಾ ಮಾತನಾಡಿ, ಪ್ರಜಾಪ್ರಭುತ್ವದ ಸಮಾಜದಲ್ಲಿ ಬದುಕುತ್ತಿರುವ ಲೈಂಗಿಕ ಕಾರ್ಯರ್ತೆಯರು ಹಾಗೂ ಅವರ ವೃತ್ತಿಪರತೆಗೆ ಧಕ್ಕೆ ತರುವಂತೆ ಪೊಲೀಸರು ಮಾಡುತ್ತಿದ್ದಾರೆ. ಸೆಕ್ಸ್ ವರ್ಕ್ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನಿಸಿದರು. ಲೈಂಗಿಕ ಕಾರ್ಯಕರ್ತೆಯರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು. ಇದೇ ವೇಳೆ ಸಾಧನ ಸಮಾಜ ಸಂಘದ ಸದಸ್ಯರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ದೂರು ಪಡೆದಿರುವ ಆಯೋಗವೂ ಶೀಘ್ರದಲ್ಲೇ ಸಭೆ ಕರೆಯವುದಾಗಿ ತಿಳಿಸಿದೆ.