ಬೆಂಗಳೂರು: ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್ ಕಲಾಪ ಮಧ್ಯಾಹ್ನದ ನಂತರ ಆರಂಭವಾಗಿ ಒಂದು ನಿಮಿಷಕ್ಕೆ ಮುಕ್ತಾಯವಾಯಿತು.
ವಿಧಾನ ಪರಿಷತ್ ಕಲಾಪ ಪುನಾರಂಭ ಆಗುತ್ತಿದ್ದಂತೆ ಪ್ರತಿಭಟನೆ ಮುಂದುವರೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಸದನದ ಬಾವಿಯಿಂದ ತಮ್ಮ ಆಸನಕ್ಕೆ ಬರಲು ಸದಸ್ಯರೆಲ್ಲ ನಿರಾಕರಿಸಿದ ಹಿನ್ನೆಲೆ, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಲಾಪವನ್ನು, ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಒತ್ತಾಯಿಸಿ ಬೆಳಗಿನಿಂದಲೂ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇಂದು ದಿನದ ಕಲಾಪ ನಡೆಯಲು ಅವಕಾಶ ಮಾಡಿಕೊಡಲಿಲ್ಲ. ಗದ್ದಲದ ಗೂಡಾಗಿದ್ದ ಪರಿಷತ್ ಕಲಾಪವನ್ನು ಸಭಾಪತಿ ಮೂರು ಸಾರಿ ಮುಂದೂಡಿದರು. ಕೊನೆಗೂ ಪ್ರತಿಪಕ್ಷದ ಸದಸ್ಯರ ಮನವೊಲಿಸುವಲ್ಲಿ ಸಫಲವಾಗದ ಹಿನ್ನೆಲೆ ಕಲಾಪವನ್ನು ನಾಳೆಗೆ ಮುಂದೂಡಿದರು.
ನಾಳೆ ಬೆಳಗ್ಗೆ 11 ಗಂಟೆಗೆ ಮರಳಿ ಕಲಾಪ ಸಮಾವೇಶಗೊಳ್ಳಲಿದೆ. ಸದನದ ಬಾವಿಗಿಳಿದು ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.