ಬೆಂಗಳೂರು : ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಗೊಂದಲಗಳ ನಿವಾರಣೆಗೆ ಬಜೆಟ್ ಅಧಿವೇಶನ ಮುಗಿದ ನಂತರ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಹಾಗೂ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸುತ್ತೇನೆ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು ವಾಲ್ಮೀಕಿ ಸಮಾಜದ ಹಿತ ಕಾಪಾಡಲು ಬದ್ಧವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಚಿವರು ಹಾಗೂ ಶಾಸಕರ ನಿಯೋಗ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇಂದು ಸಿದ್ದರಾಮಯ್ಯ ಮಾತನಾಡಿದರು.
ಹಿಂದಿನ ಸರ್ಕಾರ ಮೀಸಲಾತಿಯ ಕುರಿತು ಆತುರಾತುರವಾಗಿ ತೀರ್ಮಾನ ಮಾಡಿದ್ದು, ಗೊಂದಲ ಸೃಷ್ಟಿಸಿದೆ. ಮುಸ್ಲಿಮರಿಗೆ 4% ರಷ್ಟಿದ್ದ ಮೀಸಲಾತಿ ರದ್ದು ಮಾಡಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ 2% ರಷ್ಟು ಮೀಸಲಾತಿ ನೀಡಿದೆ. 2C, 2D ಸಹ ಮಾಡಿದ್ದಾರೆ. ಇದರ ಬಗ್ಗೆ ಗೊಂದಲಗಳಿವೆ. ಸಂವಿಧಾನಾತ್ಮಕವಾಗಿ ಇಲ್ಲದಿರುವ ಕಾರಣ ಸುದೀರ್ಘ ಚರ್ಚೆಯ ಅಗತ್ಯವಿದೆ. ಒಟ್ಟಾರೆ ಮೀಸಲಾತಿಯ ಪರಿಮಿತಿಯನ್ನು ಸಡಿಲಗೊಳಿಸದಿದ್ದರೆ ಪರಿಹಾರ ಸಿಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ: ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣಪತ್ರ ವಿತರಣೆಯಾಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಸಿ.ಆರ್.ಇ ಸೆಲ್ನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ರಾಯಚೂರು, ವಿಜಯಪುರ ಭಾಗದಲ್ಲಿ ಕೋಲಿ, ಕಬ್ಬಲಿಗ, ತಳವಾರ ಸಮುದಾಯಗಳನ್ನು ಎಸ್.ಟಿ ಗೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಕೋಲಿ ಸಮಾಜದವರು ತಳವಾರರು ಎಂದೇ ಹೇಳುತ್ತಾರೆ. ಈ ಗೊಂದಲಗಳ ಬಗ್ಗೆಯೂ ತೀರ್ಮಾನವಾಗಬೇಕು. ನಾಯಕ ಸಮುದಾಯದ ತಳವಾರರನ್ನು ಮಾತ್ರ ಎಸ್.ಟಿ ಗೆ ಸೇರಿಸಲಾಗಿದ್ದು, ಇವೆಲ್ಲಾ ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ಸಂವಿಧಾನ ಮತ್ತು ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗುವುದು' ಎಂದು ಭರವಸೆಯಿತ್ತರು.
ಪರಿಶಿಷ್ಟ ಪಂಗಡಕ್ಕೆ ಸ್ಥಾಪನೆಯಾಗಿರುವ ಪ್ರತ್ಯೇಕ ಸಚಿವಾಲಯಕ್ಕೆ ಕಾರ್ಯದರ್ಶಿ ನೇಮಕಾತಿ ಮಾಡಲಾಗುವುದು. ಬುಡಕಟ್ಟು ಸಲಹಾ ಮಂಡಳಿ ಸ್ಥಾಪನೆ ಬಗ್ಗೆ ವರದಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದರು. ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇಧಕ್ಕೆ ಸೇರಿಸಲು ನಮ್ಮ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಅದಕ್ಕೆ ಮೊದಲು ಬಿಜೆಪಿ ಸರ್ಕಾರ ಸೃಷ್ಟಿಸಿದ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಹಕಾರ ಸಚಿವ ಕೆ. ಎನ್. ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಲ್ಮೀಕಿ ಸಮುದಾಯದ 14 ಶಾಸಕರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಕೊಕ್ಕೆ.. ಮೊದಲ ಮಹತ್ವದ ತೀರ್ಮಾನ!