ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ವಿವಿಧ ಕಾರಣಕ್ಕೆ ತೀವ್ರ ಒತ್ತಡಕ್ಕೆ ಒಳಗಾಗುತ್ತಿದೆ. ಇದರ ಪರಿಣಾಮವೇ ಅಧಿಕ ರಕ್ತದೊತ್ತಡ ಸಮಸ್ಯೆ. ಈಚಿನ ವರ್ಷಗಳಲ್ಲಿ ಇದು ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಗೆ ಪ್ರಮುಖ ಕಾರಣವಾಗುತ್ತಿರುವುದು ಆತಂಕದ ಸಂಗತಿ.
ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಕಾಡಿರುವುದು ಯುವ ಸಮುದಾಯದ ಸಂರಕ್ಷಣೆ. ದಿನದಿಂದ ದಿನಕ್ಕೆ ಯುವ ಹಾಗೂ ಮಧ್ಯಮ ವರ್ಗದ ನಾಗರಿಕರು ನಾನಾ ವಿಧದ ಒತ್ತಡದಿಂದಾಗಿ ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರ ಪರಿಣಾಮ ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯು, ಕಿಡ್ನಿ ವೈಫಲ್ಯದಂತಹ ಜೀವಹಾನಿಕಾರಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಹುಡುಕಲು ವೈದ್ಯಕೀಯ ಕ್ಷೇತ್ರ ಶ್ರಮಿಸುತ್ತಿದೆ.
ಬದಲಾದ ಜೀವನ ಶೈಲಿ ಕಾರಣ: ಆದರೆ ಬದಲಾದ ಜೀವನ ಶೈಲಿ, ಶಾರೀರಿಕ ಸದೃಢತೆಗೆ ಜನತೆ ಅನುಸರಿಸುತ್ತಿರುವ ಮಾರ್ಗ, ಉತ್ತಮ ಆಹಾರ ಸೇವನೆಯಲ್ಲಿ ಆಗುತ್ತಿರುವ ಲೋಪ, ಕಾರ್ಯಕ್ಷೇತ್ರದಲ್ಲಿನ ವಿಪರೀತ ಒತ್ತಡ ಸಮಸ್ಯೆಯನ್ನು ನಿವಾರಿಸಲಾಗದೇ, ಸೂಕ್ತ ಪರಿಹಾರವನ್ನೂ ಹುಡುಕಲಾಗದೇ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ಅಧಿಕ ರಕ್ತದೊತ್ತಡ ಸಮಸ್ಯೆ: ಯುವ ಸಮುದಾಯ ಅಂದರೆ 18 ರಿಂದ 50ರ ವಯೋಮಾನದವರಲ್ಲಿ ಈಚಿನ ವರ್ಷದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತಿದೆ. ಇದರ ಪರಿಣಾಮವೇ ಹಠಾತ್ ಹೃದಯಾಘಾತ. ಅಂದರೆ ಕಾರ್ಡಿಯಾಕ್ ಅರೆಸ್ಟ್. ಇತ್ತೀಚಿನ ದಿನಗಳಲ್ಲಿ ಚಿತ್ರರಂಗ, ಮಾಧ್ಯಮ, ಮಾಹಿತಿ ತಂತ್ರಜ್ಞಾನ, ಮನರಂಜನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧ್ಯಮ ವಯಸ್ಸಿನವರ ಸರಣಿ ಸಾವಿನ ಸಂಗತಿಯನ್ನು ಕೇಳುತ್ತಲೇ ಇದ್ದೇವೆ.
ನಟರಾದ ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ರಾಜು ಶ್ರೀವಾಸ್ತವ್, ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ್ ಈ ರೀತಿ ಸಾಲು ಸಾಲು ಹೆಸರುಗಳನ್ನು ಪಟ್ಟಿ ಮಾಡಬಹುದು. ಮಾನಸಿಕ ಒತ್ತಡ ನಿಭಾಯಿಸಲು ಹಾಗೂ ಶಾರೀರಿಕ ದೃಢತೆಗಾಗಿ ಒಂದಿಷ್ಟು ವ್ಯಾಯಾಮ, ಕಸರತ್ತು, ಜಿಮ್ಗೆ ತೆರಳುವುದು ಇಂದಿನ ಯುವ ಸಮುದಾಯದಲ್ಲಿ ಸಹಜ. ಆದರೆ ನಿಯಮಿತವಾದ ಕ್ರಮದಲ್ಲಿ ಯಾವುದೂ ಆಗದಿರುವ ಹಿನ್ನೆಲೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಯುವ ಸಮುದಾಯಕ್ಕೆ ಹೆಚ್ಚಿದ ಆಪತ್ತು: ಮುಂಬಯಿಯ ಪೋರ್ಟಿಸ್ ಆಸ್ಪತ್ರೆ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಕನ್ಸಲ್ಟಂಟ್ ಡಾ. ವಿವೇಕ್ ಮಹಾಜನ್ ಪ್ರಕಾರ, ಹೃದಯದ ಮೇಲೆ ಒತ್ತಡ ಹೆಚ್ಚಾಗುವುದರಿಂದ ಕಾರ್ಡಿಯಾಕ್ ಅರೆಸ್ಟ್ ಆಗುತ್ತಿದ್ದು, ಜನಪ್ರಿಯ ವ್ಯಕ್ತಿಗಳ ಸಾವು ಮಾತ್ರ ಜನರಿಗೆ ತಿಳಿಯುತ್ತಿದೆ. ಆದರೆ ಮಧ್ಯಮ ಹಾಗೂ ಯುವ ಸಮುದಾಯದ ಸಾಕಷ್ಟು ದೊಡ್ಡ ಸಂಖ್ಯೆಯ ಯುವಕ ಯುವತಿಯರು ಈ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ವಿಪರ್ಯಾಸವೆಂದರೆ ಹೃದಯ ನಾಳಗಳಲ್ಲಿ ಶೇ 50ರಷ್ಟು ಬ್ಲಾಕೇಜ್ ಇದ್ದವರು ಸಹ ಹೆಚ್ಚು ರಕ್ತದೊತ್ತಡದಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ತಪಾಸಣೆ ಮಾಡಿಸಿಕೊಳ್ಳಿ: ಅಧಿಕ ರಕ್ತದೊತ್ತಡ ನಿಯಂತ್ರಣ ಒಂದರಿಂದಲೇ ಯುವ ಸಮುದಾಯವನ್ನು ಕಾಡುವ ಶೇ 60-70 ರಷ್ಟು ಸಮಸ್ಯೆಯನ್ನು ನಿವಾರಿಸಬಹುದು. ನಗರ ಪ್ರದೇಶದಲ್ಲಿ ಶೇ 30 ರಿಂದ 35ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ 20 ರಿಂದ 25 ರಷ್ಟು ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಕೋವಿಡ್ ನಂತರದ ದಿನಗಳಲ್ಲಿ ಜನರಲ್ಲಿ ವಿವಿಧ ಕಾರಣಗಳಿಗೆ ಒತ್ತಡ ಹೆಚ್ಚಾಗಿದ್ದು, ಶಾರೀರಿಕ ದೌರ್ಬಲ್ಯ ಕಾಡುತ್ತಿದೆ. 18 ವರ್ಷ ಮೇಲ್ಪಟ್ಟವರು ಸಾಧ್ಯವಾದಷ್ಟು ತ್ವರಿತವಾಗಿ ವೈದ್ಯರ ಬಳಿ ರಕ್ತದೊತ್ತಡ ತಪಾಸಣೆಗೆ ಒಳಗಾಗುವುದು ಒಳಿತು ಎನ್ನುತ್ತಾರೆ ಡಾ. ಮಹಾಜನ್.
ಆರಂಭದಲ್ಲೇ ಚಿಕಿತ್ಸೆ ಅಗತ್ಯ: ಅಧಿಕ ರಕ್ತದೊತ್ತಡದ ನಿರ್ವಹಣೆ ಮತ್ತು ಚಿಕಿತ್ಸೆ ಕುರಿತು ಮಾತನಾಡಿರುವ ಬೆಂಗಳೂರಿನ ವೈಟ್ ಫೀಲ್ಡ್ ಮಣಿಪಾಲ್ ಆಸ್ಪತ್ರೆ ಕಾರ್ಡಿಯಾಲಜಿ ಹಾಗೂ ಎಲೆಕ್ಟ್ರೋಫಿಜಿಯಾಲಜಿ ಕನ್ಸಲ್ಟಂಟ್ ಡಾ. ಸಂದೇಶ್ ಪ್ರಭು ಪ್ರಕಾರ, ರಕ್ತದೊತ್ತಡ 130-80 ಇದ್ದವರದ್ದೂ ಸಹ ಒಂದು ಹಂತದಲ್ಲಿ ರಕ್ತದೊತ್ತಡ ಇದೆ ಎಂದೇ ಪರಿಗಣನೆಯಾಗುತ್ತದೆ. 140-90 ತಲುಪಿದಾಗ ಚಿಕಿತ್ಸೆ ಆರಂಭಿಸುವುದು ಉತ್ತಮ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಫಲಿತಾಂಶ ಉತ್ತಮವಾಗಿರುತ್ತದೆ. ಆನುವಂಶಿಕವಾಗಿ ರೋಗದ ಸಂಪರ್ಕ ಇರುವವರು ಕಡಿಮೆ ವಯಸ್ಸಿನಲ್ಲೇ ತಪಾಸಣೆಗೆ ಒಳಗಾಗಬೇಕು. 18 ನೇ ವರ್ಷದಿಂದ ಪ್ರತಿ 5 ವರ್ಷಕ್ಕೊಮ್ಮೆ ರಕ್ತದೊತ್ತಡ ತಪಾಸಣೆ ಮಾಡಿಕೊಳ್ಳಬೇಕು. ಕೆಲ ಔಷಧಗಳಿಂದ ಸಹ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡಬಹುದು. ಇದರಿಂದ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧ ಪಡೆಯುವುದು ಸರಿಯಲ್ಲ. ಉಪ್ಪಿನ ಸೇವನೆ ಕಡಿಮೆ ಮಾಡಬೇಕು. ಹಣ್ಣು, ತರಕಾರಿ ಹೆಚ್ಚಾಗಿ ಸೇವಿಸಬೇಕು, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.
ವಾಕಿಂಗ್ ನಿಂದ ಸದೃಢತೆ: ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್ ಕ್ಲಿನಿಕಲ್ ಹಾಗೂ ಇಮೇಜಿಂಗ್ ಸೇವಾ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ. ಅಜಿತ್ ಕೆ.ಎನ್. ಪ್ರಕಾರ, 18 ರಿಂದ 50 ರ ವಯೋಮಾನದವರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಡುತ್ತದೆ. ಅಧಿಕ ರಕ್ತದೊತ್ತಡ ಇಂದು ಮಹಿಳೆ, ಪುರುಷರಲ್ಲಿ ದೊಡ್ಡ ಮಟ್ಟದ ಬೇಧವಿಲ್ಲದೇ ಕಂಡುಬರುತ್ತಿದೆ. ಜಿಮ್ಗೆ ತೆರಳಿದರೆ ಸಾಯುತ್ತೇವೆ ಎಂಬ ಆತಂಕವೂ ಕೆಲವರಲ್ಲಿ ಇದೆ. ಇದು ಸಂಪೂರ್ಣ ಸರಿಯಲ್ಲ. ಅಧಿಕ ರಕ್ತದೊತ್ತಡ ಇರುವವರು ಒತ್ತಡದ ವ್ಯಾಯಾಮ ಮಾಡಿದಾಗ ಸಮಸ್ಯೆ ಕಾಡಬಹುದು. ಇದರಿಂದ ಇಂತಹ ಆತಂಕ ಇರುವವರು ದಿನಕ್ಕೆ 8-10 ಸಾವಿರ ಹೆಜ್ಜೆ ವಾಕಿಂಗ್ ಮಾಡಿದರೂ ಶಾರೀರಿಕ ಸದೃಢತೆ ಹೊಂದಬಹುದು.
ನಿತ್ಯ 35 ರಿಂದ 40 ನಿಮಿಷ ಬ್ರಿಸ್ಕ್ ವಾಕಿಂಗ್ (ವೇಗದ ನಡಿಗೆ), ಈಜು, ಸೈಕ್ಲಿಂಗ್, ಟ್ರೇಡ್ ಮಿಲ್ ವಾಕಿಂಗ್ ಮಾಡಿದರೂ ಉತ್ತಮ. ವಾರದಲ್ಲಿ 5-6 ದಿನ 30 ನಿಮಿಷ ನಿಯಮಿತವಾಗಿ ವಾಕಿಂಗ್ ಮಾಡುವವರ ಆರೋಗ್ಯ ಉತ್ತಮವಾಗಿಯೇ ಇರುತ್ತದೆ. ಮಧ್ಯಪಾನ, ಧೂಮಪಾನ ಆರೋಗ್ಯಕ್ಕೆ ಮಾರಕ. ಹಣ್ಣು ಸೇವನೆ, ಫೈಬರ್ ಅಂಶ ಉಳ್ಳ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ.
ಒಟ್ಟಾರೆ ಯುವ ಸಮುದಾಯದವರನ್ನು ಕಾಡುತ್ತಿರುವ 'ಕಾರ್ಡಿಯಾಕ್ ಅರೆಸ್ಟ್’ ಸಮಸ್ಯೆಗೆ ಶಾರೀರಿಕ ಸದೃಢತೆ ಮಾತ್ರ ಪರಿಹಾರ ಅನ್ನುತ್ತದೆ ವೈದ್ಯಲೋಕ. ಅದಕ್ಕೆ ಯುವ ಸಮುದಾಯದ ಬಳಿ ಕೆಲಸದೊತ್ತಡದ ನಡುವೆ ಸಮಯ ಇದೆಯಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಆಧ್ಯಾತ್ಮಿಕ ಶಿಸ್ತು ಯೋಗ; ಯೋಗಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ!