ಬೆಂಗಳೂರು: ವಿಧಾನಪರಿಷತ್ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಕಚೇರಿಗೆ ಇಂದು ಆಗಮಿಸಿದ ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಕಷ್ಟು ಮನವೊಲಿಕೆಯ ನಂತರವೂ ಸಿಎಂ ಇಬ್ರಾಹಿಂ ತಮ್ಮ ಮನಸ್ಸು ಬದಲಿಸದೇ ನಿರ್ಧಾರಕ್ಕೆ ಗಟ್ಟಿ ಉಳಿಸಿಕೊಂಡಿದ್ದು, ಈ ಹಿಂದೆ ತಿಳಿಸಿದಂತೆ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಎಂ ಇಬ್ರಾಹಿಂ ಮಾತನಾಡಿ, ಗುರುವಾರದ ದಿವಸ ಎಲ್ಲಾ ಧರ್ಮ ಗಳಿಗೆ ಶ್ರೇಷ್ಠವಾದದ್ದು. ಇಂದು ರಾಜೀನಾಮೆ ಕೊಟ್ಟಿದ್ದೇನೆ, ನನ್ನ ಮುಂದಿನ ನಡೆ ಇಲ್ಲಿಂದ ಆರಂಭ. ನನ್ನ ಮೇಲೆ ಏನು ಹೊರೆ ಇತ್ತು ಅದನ್ನ ಕಳಚಿಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನ ದೇವೇಗೌಡರ ಪಾಲಿಗೆ ಬಿಟ್ಟಿದ್ದೇನೆ.
ಅವರು ಮಾರ್ಗದರ್ಶಕರು. ದೇಶಕ್ಕೆ ಮಾರ್ಗದರ್ಶನ ಕೊಟ್ಟವರು, ಅಜಾತಶತ್ರು. ಕರ್ನಾಟಕ ರಾಜ್ಯದಲ್ಲಿ ವಯೋವೃದ್ದ ರಾಜಕಾರಣಿ. ಅವರು ಅಜಾತ ಶತ್ರು. ನಮ್ಮನಡೆ ಅವರ ಜೊತೆಯಲ್ಲಿ ಇದು ಸರ್ವಸಮ್ಮತ ಅಭಿಪ್ರಾಯ ಅದು. ಅನೇಕ ಜನ ಬರ್ತಾರೆ ಯಾರಿಗೂ ಬಲವಂತ ಮಾಡೋದಿಲ್ಲ ಎಂದರು.
ಯುಗಾದಿ ಮುಗಿದ ಮೇಲೆ ಏಪ್ರಿಲ್ ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರುತ್ತೆ ಎಂದ ಇಬ್ರಾಹಿಂ, ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್ಗೆ ಇದೆ. ಮೊದಲು ಜೆಡಿಎಸ್ ನಂತರ ಬಿಜೆಪಿ ಕೊನೆಯಲ್ಲಿ ಕಾಂಗ್ರೆಸ್. ಕಾಂಗ್ರೆಸ್ಗೆ ಉತ್ತರಪ್ರದೇಶ, ಪಂಜಾಬ್ನಲ್ಲಿ ಆದಂತೆಯೇ ಕರ್ನಾಟಕದಲ್ಲೂ ಆಗಲಿದೆ. ನಾನು ಯಾವ ಪಕ್ಷವನ್ನೂ ಟೀಕೆ ಮಾಡುವುದಿಲ್ಲ, ಯಾರನ್ನೂ ಬೈಯ್ಯುವುದಿಲ್ಲ ಎನ್ನುತ್ತ 'ಅನ್ಯರ ಡೊಂಕು ನೀವೇಕೆ ತಿದ್ದುವಿರಯ್ಯ' ಎಂದು ಬಸವಣ್ಣನವರ ವಚನ ಹೇಳಿದರು.
ಸ್ವಯಂ ಪ್ರೇರಣೆಯಿಂದ ರಾಜೀನಾಮೆ: ಇಂದು ನನ್ನ ರಾಜೀನಾಮೆಯನ್ನು ಸಭಾಪತಿಗಳು ಅಂಗಿಕರಿಸಿದ್ದಾರೆ. ಇಷ್ಟು ದಿನ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರು, ಒಳ್ಳೊಳ್ಳೆ ಸ್ನೇಹಿತರಿದ್ದರು ವಿಧಿಯಿಲ್ಲದೇ, ಪಕ್ಷ ಬಿಡಬೇಕಾಯಿತು, ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಪದವಿ ಕೊಟ್ಟಾಗ ಯಾವತ್ತೂ ಇಟ್ಟುಕೊಳ್ಳಬಾರದು, ಸ್ವಯಂ ಪ್ರೇರಣೆಯಿಂದ ಬಿಟ್ಟು ಕೊಟ್ಟಿದ್ದೇನೆ. ಇನ್ಮುಂದೆ ಜನ ನನ್ನನ್ನು ಕೈಹಿಡಿಯುತ್ತಾರೆ. ಜನರಿಗೆ ನಾನು ಇಷ್ಟೇ ಹೇಳುವುದು. 'ಎನ್ನ ನಾಮ, ಕ್ಷೇಮ ನಿಮ್ಮದಯೇ, ಎನ್ನ ನಾಮ ಅಪಮಾನ ನಿಮ್ಮದಯೇ ಎನ್ನ ಹಾನಿ ವೃದ್ದಿ ನಿಮ್ಮದಯೇ ಬಳ್ಳಿಗೆ ಕಾಯಿ ಧನ್ಯತೆ ಕೂಡಲಸಂಗಮದೇವ'. ನಾನು ಕಾಯಿ ಇದ್ದ ಹಾಗೆ, ನೀವು ಬಳ್ಳಿ ಇದ್ದ ಹಾಗೆ. ಇಷ್ಟುದಿನ ನನನ್ನು ಕಾಪಾಡಿದ್ದೀರಾ ಎಂದರು.
ವಿವಾದ ಮಾಡಿಕೊಳ್ಳಬೇಡಿ: ರಾಜ್ಯದಲ್ಲಿ ಉದ್ಬವಿಸಿರುವ ಸಾಮರಸ್ಯ ವಿಚಾರ ಕುರಿತು ಮಾತನಾಡಿ, ನಾನು ಬಿಜೆಪಿಯವರಿಗೆ ಮನವಿ ಮಾಡುತ್ತೇನೆ. ಮತೀಯ ಭಾವನೆ ಏನಿದೆ? ನಾವು ಹಿಂಸೆಯಿಂದ ಚುನಾವಣೆ ಗೆಲ್ಲುವುದಿಲ್ಲ. ನಾವು ಐಡಿಯಾಲಜಿ ಮೇಲೆ ಎಲೆಕ್ಷನ್ ಗೆಲ್ಲುತ್ತೇವೆ ಎಂದು ಅಮಿತ್ ಶಾ ಕೂಡ ಸಂಸತ್ನಲ್ಲಿ ಹೇಳಿದ್ದಾರೆ. ದೊಡ್ಡವರೇ ಹಾಗೇ ಹೇಳುವಾಗ, ನೀವು ಯಾಕೆ ಇಲ್ಲಿ ಈ ಕಟ್ಟು ಆ ಕಟ್ಟು, ಚರಕ ಕಟ್ಟು ತಲೆ ಕಟ್ಟು ಅಂತ ಸುಮ್ಮನೆ ಬೇಡದಿರುವ ವಿಷಯಗಳನ್ನೆಲ್ಲ ವಿವಾದ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಷರತ್ತು ಹಾಕಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ, ಯಾವ ಷರತ್ತೂ ಇಲ್ಲ. ಜೆಡಿಎಸ್ ನನ್ನ ಮನೆ, ನನ್ನ ಮನೆಗೆ ಏನಾದರೂ ಷರತ್ತು ಹಾಕಿ ಹೋಗ್ತೀವಾ? ಎಲ್ಲಿ ಬಾಗಿಲು ಇದೆ, ಎಲ್ಲಿ ಕಿಟಕಿ ಇದೆ, ಎಲ್ಲಿ ಅಡುಗೆ ಮನೆ ಇದೆ ಎಂಬುದು ನನಗೆ ಗೊತ್ತಿಲ್ವಾ. ನನ್ನ ಮನೆಗೆ ಹೋಗಬೇಕಾದರೆ ದಾರಿ ತೋರಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವದ ತಳಹದಿಯ ನಾಯಕನನ್ನು ಆರಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ ಎಂದರು.
ಕರ್ನಾಟಕ ಯುಪಿ ಅಲ್ಲ, ಕರ್ನಾಟಕ ಕರ್ನಾಟಕನೇ. ಇಲ್ಲ ಧರ್ಮಾಧಾರಿತ ವೋಟ್ ಇಲ್ಲ, ಇಲ್ಲಿ ಜಾತಿ ಸಮೀಕರಣ. ಒಕ್ಕಲಿಗ, ಲಿಂಗಾಯತ, ಹಿಂದುಳಿದವರು, ದಲಿತರು, ಮುಸ್ಲಿಮರು. ಈ ಪಂಚಭೂತಗಳು ಯಾವ್ ಯಾವ್ ಎಲ್ಲೆಲ್ಲಿ ಹೋಗ್ತಾವೆ ಅಗ ನಿರ್ಧಾರ ಆಗಲಿದೆ. ಜೆಡಿಎಸ್ನಲ್ಲಿ ಡಿಸೈಡ್ ಮಾಡಬೇಕು ಎಂದರೆ ಹೈಕಮಾಂಡ್ ಕೇಳಲು ದೆಹಲಿಗೆ ಹೋಗವ ಅಗತ್ಯವಿಲ್ಲ. ಇಲ್ಲಿ ಬೆಳಗ್ಗೆ ಎದ್ದರೆ ದೇವೇಗೌಡರು, ಕುಮಾರಸ್ವಾಮಿ ದರ್ಶನ ಮಾಡಬಹುದು. ಇನ್ನೂ 15 ದಿವಸ ಕಾದು ನೋಡಿ ಎಂದು ಹೇಳಿದರು.
ಇದನ್ನೂ ಓದಿ: ತಲೆ - ಕಾಲು ಇಲ್ಲದ 50ಕ್ಕೂ ಹೆಚ್ಚು ಪ್ರಾಣಿಗಳ ಮೃತ ದೇಹಗಳು ಪತ್ತೆ.. ಬೆಚ್ಚಿಬಿದ್ದ ಗ್ರಾಮಸ್ಥರು, ವಾಮಾಚಾರದ ಶಂಕೆ!