ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕರಡು ಪ್ರತಿ ಸಿದ್ಧಪಡಿಸಿದ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಂದ ಹಿಡಿದು ಗ್ರಾಮಾಂತರ ಪ್ರದೇಶಗಳ ಶಾಲೆಗಳ ಶಿಕ್ಷಕರ ಅಭಿಪ್ರಾಯವನ್ನು ಕೂಡ ಪಡೆದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಂತದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಜಾರಿಗೆ ತರಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ವಿದ್ಯಾಭಾರತಿ ಕರ್ನಾಟಕ ಮತ್ತು ಸಿಎಮ್‌ಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸಿಎಮ್‌ಆರ್ ಸಂಸ್ಥೆಯ ಸಭಾಂಗಣದಲ್ಲಿ ‘ಕರ್ನಾಟಕ ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ, ಅವಕಾಶಗಳು ಹಾಗೂ ಕಾರ್ಯತಂತ್ರಗಳು’ ವಿಷಯದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಹಲವು ವರ್ಷಗಳಿಂದ ಹಲವು ಸುತ್ತಿನಲ್ಲಿ ಅಭಿಪ್ರಾಯ, ಚರ್ಚೆ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಸಿದ್ದಪಡಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಸಾರ ರಾಜ್ಯ ಮಟ್ಟದಲ್ಲಿ ಪಠ್ಯಕ್ರಮ ಸಿದ್ಧಪಡಿಸಲು ಕರ್ನಾಟಕ ರಾಜ್ಯಕ್ಕೆ ಸೂಚನೆ ನೀಡಿರುವ ಕಾರಣ ಶಿಕ್ಷಣ ತಜ್ಞರು, ಶಿಕ್ಷಕರು, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಎಲ್ಲರೂ ನೀಡುವ ಸಲಹೆ, ಸೂಚನೆಗಳನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಹಲವು ತಜ್ಞರ ಜೊತೆ ಚರ್ಚಿಸಲಾಗಿದೆ. ವಿಜ್ಞಾನಿ ಕಸ್ತೂರಿ ರಂಗನ್, ರಾಷ್ಟ್ರೀಯ ಶಿಕ್ಷಣ ನೀತಿ ಸಲಹಾ ಸಮಿತಿ ಸದಸ್ಯರು, ವಿಶ್ವವಿದ್ಯಾಲಯ ಅನುದಾನ ಆಯೋಗದ ಸದಸ್ಯರಾದ ಎಂ.ಕೆ ಶ್ರೀಧರ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ತಜ್ಞರು, ಇಲಾಖೆಯಲ್ಲಿ ಕೆಲಸ ಮಾಡಿದ ಹಾಲಿ ಮತ್ತು ನಿವೃತ್ತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢ ವಿಭಾಗಕ್ಕೆ ಕೌನ್ಸಿಲ್ ರಚಿಸಬೇಕು ಎಂಬ ಪ್ರಸ್ತಾವನೆ ಇದೆ. ಸರ್ಕಾರದಿಂದ ನಿಯಮಾನುಸಾರ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕೌನ್ಸಿಲ್ ರಚಿಸಲಾಗುತ್ತದೆ. ನಂತರ ಎಲ್ಲರ ಸಲಹೆಗಳ ಅನುಸಾರ ಪಠ್ಯಕ್ರಮದ ಕುರಿತು ತೀರ್ಮಾನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಣದಲ್ಲಿ ಸುಧಾರಣೆ, ಮೌಲ್ಯಾಧಾರಿತ ಶಿಕ್ಷಣ ನೀಡುವ ಶಿಕ್ಷಣ ನೀತಿ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಸಿಎಮ್‌ಆರ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕೆ.ಸಿ ರಾಮಮೂರ್ತಿ, ರಾಷ್ಟ್ರೀಯ ಶಿಕ್ಷಣ ನೀತಿ ಸಲಹಾ ಸಮಿತಿ ಸದಸ್ಯರು ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ಸದಸ್ಯರಾದ ಪ್ರೊ. ಎಂ. ಕೆ. ಶ್ರೀಧರ್, ವಿಶ್ವಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೂಸಿ ರಾಮಕೃಷ್ಣ ರಾವ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.