ಬೆಂಗಳೂರು: ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನ್ಮದಿನ ಅಂಗವಾಗಿ ಕೆಪಿಸಿಸಿ ಮಹಿಳಾ ಘಟಕದಿಂದ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಬ್ಬನ್ ಉದ್ಯಾನದಲ್ಲಿ ಒಂದು ಲಕ್ಷ ಬೀಜ ನೆಟ್ಟು ಮರ ಬೆಳೆಸುವ ಕಾರ್ಯಕ್ರಮ ನಡೆಸಲಾಯಿತು.
ಇದಕ್ಕಾಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಒಂದು ಲಕ್ಷ ಸೀಡ್ ಬಾಲ್ ತಯಾರಿಸುವ ಕಾರ್ಯವನ್ನು ಮಾಡಲಾಯಿತು. ಅಲ್ಲದೆ ಬೀಜದ ಮಣ್ಣಿನ ಉಂಡೆಗಳನ್ನ ನೆಡಲಾಯಿತು.
ಈ ಸಂದರ್ಭದಲ್ಲೇ ಮಾಜಿ ಸಚಿವ ರೋಷನ್ ಬೇಗ್ ಅಮಾನತು ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬೇಗ್ ಅವರು ಪಕ್ಷದ ನಾಯಕರ ಬಗ್ಗೆ ಆ ರೀತಿಯಲ್ಲ ಹೇಳ್ತಾರೆ ಅಂತ ಗೊತ್ತಿರಲಿಲ್ಲ. ಹೀಗಾಗಿ ಅವರ ವಿರುದ್ಧ ವರಿಷ್ಠರು ಶಿಸ್ತುಕ್ರಮ ತೆಗೆದುಕೊಂಡಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ವಿಚಾರವೇ ಬೇರೆ. ಭಿನ್ನಾಭಿಪ್ರಾಯಗಳು ಹಲವು ಇರುತ್ತವೆ. ಅವನ್ನ ಪಕ್ಷದ ನೆಲೆಗಟ್ಟಿನಲ್ಲಿ ಬಗೆಹರಿಸಿಕೊಳ್ಳಬಹುದು. ವೈಯುಕ್ತಿಕವಾಗಿ ವಾಗ್ದಾಳಿ ನಡೆಸುವುದು ತಪ್ಪು ಎಂದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ
ಇನ್ನು ಲಿಂಗಾಯತ ಸಭೆ ಬಗ್ಗೆ ಮಾತನಾಡಿದ ಖಂಡ್ರೆ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ಅಧ್ಯಕ್ಷನಾಗೋಕೆ ಲಿಂಗಾಯತ ಮುಖಂಡರ ಸಭೆ ಕರೆದಿಲ್ಲ. ಪಕ್ಷವನ್ನ ಮತ್ತಷ್ಟು ಸದೃಢಗೊಳಿಸಬೇಕು. ಮೊದಲು ಸಮುದಾಯ ಬಲಪಡಿಸಬೇಕಿದೆ. ಹೀಗಾಗಿ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ಸಭೆಗೂ ಅಧ್ಯಕ್ಷರ ವಿಚಾರಕ್ಕೂ ಇಲ್ಲಿ ಸಂಬಂಧವಿಲ್ಲ ಎಂದರು.
ರಮ್ಯಾ ಪರ ಪುಷ್ಪಾ ದನಿ
ಇನ್ನು ಎಐಸಿಸಿ ಸೋಶಿಯಲ್ ಮಿಡಿಯಾ ಮುಖ್ಯಸ್ಥೆ ರಮ್ಯಾ ಕಣ್ಮರೆ ವಿಚಾರ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ, ರಮ್ಯಾರನ್ನು ಎಲ್ಲಿಯೂ ಗೇಟ್ ಪಾಸ್ ಕೊಟ್ಟಿಲ್ಲ. ಅವರು ಸೋಶಿಯಲ್ ಮಿಡಿಯಾದಲ್ಲೇ ಇದ್ದಾರೆ. ಅವರು ಯಾವುದೇ ಹಣ ದುರ್ಬಳಕೆ ಮಾಡಿಕೊಂಡಿಲ್ಲ. ಅದೆಲ್ಲವೂ ಊಹಾಪೋಹದ ಸುದ್ದಿಗಳು. ಅವರು ಫೇಸ್ಬುಕ್, ಟ್ವಿಟ್ಟರ್ನಲ್ಲೂ ಸಕ್ರಿಯರಾಗಿದ್ದು, ಇಂದು ರಾಹುಲ್ ಜನ್ಮದಿನಕ್ಕೆ ಶುಭಕೋರಿದ್ದಾರೆ ಎಂದು ಹೇಳಿದರು.