ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆ ಹಲವು ರೀತಿಯ ನಿರ್ಬಂಧ ವಿಧಿಸಿದೆ. ಮತ್ತೊಂದೆಡೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಯಲು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಸೆಕ್ಷನ್ 144 ಜಾರಿ ಮಾಡಿದ್ದಾರೆ.
ವಾರಾಂತ್ಯದಲ್ಲಿ ಸಾಮಾನ್ಯವಾಗಿರುವ ಜನಜಂಗುಳಿ ತಪ್ಪಿಸಲು ನಿಷೇಧಾಜ್ಞೆ ಜಾರಿಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ನಿಷೇಧಾಜ್ಞೆ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ. ಅಲ್ಲದೇ, ಸದ್ಯ ಜಾರಿಯಲ್ಲಿರುವ ರಾತ್ರಿ ನಿಷೇಧಾಜ್ಞೆ ಕೂಡ ಜನವರಿ 19ರ ವರೆಗೆ ಮುಂದುವರೆಯಲಿದೆ. ಇದರಿಂದ ಉದ್ಯಮಗಳು, ಶಾಪಿಂಗ್ ಮಾಲ್, ಥಿಯೇಟರ್, ಶಾಪಿಂಗ್ ಸ್ಟ್ರೀಟ್ ಗಳಿಗೆ ನಷ್ಟವಾಗಲಿದೆ. ಅಲ್ಲದೇ, ಇಂದಿನಿಂದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಅಂಗಡಿಗಳಲ್ಲಿ ಶೇ. 50ರಷ್ಟು ಮಿತಿ ಜಾರಿಗೆ ಬರಲಿದೆ.
144 ಸೆಕ್ಷನ್ ಜಾರಿ:
ಈ ನಡುವೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ ನಗರ ಪೊಲೀಸ್ ಆಯುಕ್ತರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಇಂದಿನಿಂದ ಜನವರಿ 19ವರೆಗೂ ನಗರದಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹವರ ವಿರುದ್ಧ ಐಪಿಸಿ 188 ಸೆಕ್ಷನ್, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
1ರಿಂದ 9ನೇ ತರಗತಿಗಳು ಹಾಗೂ ಪದವಿ ತರಗತಿಗಳು ರದ್ದು:
ರಾಜಧಾನಿಯಲ್ಲಿ ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ವಾರಗಳ ಕಾಲ ಯುಕೆಜಿ, ಎಲ್ಕೆಜಿ ಸೇರಿದಂತೆ 1ರಿಂದ 9ನೇ ತರಗತಿಗಳು ಹಾಗೂ ಪದವಿ, ಸ್ನಾತಕೋತ್ತರ ಕಾಲೇಜುಗಳ ಭೌತಿಕ ತರಗತಿಗಳು ರದ್ದುಗೊಂಡಿವೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ/ಎಲ್.ಕೆ.ಜಿ/ಯು.ಕೆ.ಜಿ. ಹಾಗೂ 1-9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಇಂದಿನಿಂದ ಜನವರಿ 19ರವರೆಗೆ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ, ಕೊರೊನಾ ತೀವ್ರತೆ ಹೆಚ್ಚಾದರೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಎಂದಿನಂತೆ 10ರಿಂದ ದ್ವಿತೀಯ ಪಿಯುಸಿ ತರಗತಿಗಳು:
ಎಸ್ಎಸ್ಎಲ್ಸಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ನಡೆಯಲಿವೆ. ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಈ ಮಕ್ಕಳಿಗೆ ಭೌತಿಕ ತರಗತಿ ನಡೆಸುವುದು ಅನಿವಾರ್ಯ. ಹೀಗಾಗಿ ಬೆಂಗಳೂರಿನಲ್ಲಿ 10ರಿಂದ ದ್ವಿತೀಯ ಪಿಯುಸಿ ತರಗತಿಗಳು ಎಂದಿನಂತೆ ಸೋಮವಾರದಿಂದ ಶುಕ್ರವಾರದವರೆಗೆ ನಡೆಯಲಿವೆ.
ವಿದ್ಯಾರ್ಥಿಗಳಿಗೆ ಕೋವಿಡ್-19ರ ಎಲ್ಲ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಭೌತಿಕ ತರಗತಿಗಳನ್ನು ಎಂದಿನಂತೆ ನಡೆಸಲು ಸೂಚಿಸಲಾಗಿದೆ. ಇದರೊಂದಿಗೆ ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಗೂ ಯಾವುದೇ ನಿರ್ಬಂಧ ಹೇರಿಲ್ಲ. ಈ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಆನ್ಲೈನ್/ಇತರ ಮಾರ್ಗಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಬೋಧನಾ ಚಟುವಟಿಕೆಗಳನ್ನು ಮುಂದುವರೆಸಲು ತಿಳಿಸಲಾಗಿದೆ.
ಇದನ್ನೂ ಓದಿ: Weekend Curfew: ಬೆಂಗಳೂರಲ್ಲಿ ಏನಿರುತ್ತೆ, ಏನಿರೋಲ್ಲ..? ಇಲ್ಲಿದೆ ಡೀಟೇಲ್ಸ್