ದೊಡ್ಡಬಳ್ಳಾಪುರ: ಗ್ರಾಮ ಪಂಚಾಯತ್ ಚುನಾವಣೆ ಕಣ ರಂಗೇರಿದ್ದು ವಿಧಾನಸಭೆ ಚುನಾವಣೆಗೆ ಸಡ್ಡು ಹೊಡೆಯುವಂತಿದೆ. ನಾಮಪತ್ರ ಸಲ್ಲಿಸಲು ಬರುತ್ತಿರುವ ಅಭ್ಯರ್ಥಿಗಳ ಅಬ್ಬರ ಜೋರಾಗಿದೆ.
ಎರಡನೇ ಹಂತದ ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಚುನಾವಣೆ ಅಬ್ಬರ ಜೋರಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳೆಘಟ್ಟದ ಗ್ರಾಮದ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಮೆರುಗು ನೀಡಲು ತಮಟೆಯ ಆರ್ಭಟ ಕಂಡು ಬಂತು. ನೇರಳೆಘಟ್ಟ ಗ್ರಾಮದಿಂದ ಹಣಬೆ ಗ್ರಾಮ ಪಂಚಾಯಿತಿವರೆಗೆ ಸುಮಾರು 5 ಕಿ.ಮೀ ವರೆಗೂ ಅಭ್ಯರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಓದಿ:ಡಿ.19ಕ್ಕೆ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ
ಮೆರವಣಿಗೆಯುದ್ದಕ್ಕೂ ತಮಟೆ ಏಟಿಗೆ ಪಡ್ಡೆ ಹುಡುಗರು ಹೆಜ್ಜೆ ಹಾಕಿ ತಮ್ಮ ಅಭಿಮಾನ ತೋರಿಸಿದರು. ಊರಿನ ಮಹಿಳೆಯರು ವೃದ್ಧರು ಸೇರಿದಂತೆ ಎಲ್ಲರೂ ಸಹ ಮೆರವಣಿಯಲ್ಲಿ ಸಾಗಿ ತಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರು. ಇದೇ ಸಮಯದಲ್ಲಿ ಮಾತನಾಡಿದ ಮುಖಂಡರಾದ ನರಸಿಂಹಮೂರ್ತಿ ಕೃಷಿ ಕಾಯಕ ಮಾಡಿಕೊಂಡು ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಚುನಾಯಿತರಾದವರ ಮೇಲಿದೆ. ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಊರಿನ ಅಭಿವೃದ್ಧಿ ಮಾಡಲಾಗುವುದೆಂದು ಭರವಸೆ ನೀಡಿದರು.