ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ಮೊದಲ ಹಂತದ ಡೋಸೇಜ್ ಅನ್ನು ಆರೋಗ್ಯ ಕಾರ್ಯಕರ್ತರಿಗೆ ನೀಡಿದ ಬಳಿಕ, ಇದೀಗ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.
ಲಸಿಕೆ ಪಡೆಯುವುದು ಕಡ್ಡಾಯವಲ್ಲದ ಕಾರಣ ಸ್ವಯಂ ಆಗಮಿಸಿ ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಒಟ್ಟು 8 ಲಕ್ಷಕ್ಕೂ ಹೆಚ್ಚು ಗುರಿ ಹೊಂದಿದ್ದು, ಇದರಲ್ಲಿ ಕೇವಲ 3 ಲಕ್ಷದಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಫೆಬ್ರವರಿ 28 ರೊಳಗೆ ನೋಂದಣಿಯಾಗಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಲಸಿಕೆ ಪಡೆಯಲು ಕಾರ್ಯಕರ್ತರು ಹಿಂದೇಟು ಹಾಕುತ್ತಿರುವ ಕಾರಣ, ಮುಂದಿನ ದಿನಗಳಲ್ಲಿ ಲಸಿಕೆ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಕೆಲ ದಿನಗಳ ಕಾಲ ವ್ಯಾಕ್ಸಿನೇಷನ್ ಪ್ರಕ್ರಿಯೆ ನೋಡಲಾಗುವುದು. ಯಾರೂ ಲಸಿಕೆ ಪಡೆಯಲು ಮುಂದಾಗದೆ ಇದ್ದರೆ, ಕಡ್ಡಾಯ ಮಾಡಲು ಚಿಂತನೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪನವರ ಬಳಿ ಚರ್ಚಿಸಲಾಗುವುದು, ಒಂದು ವೇಳೆ ಕಡ್ಡಾಯ ಮಾಡುವ ಅಗತ್ಯ ಇದ್ದರೆ, ಲಸಿಕೆ ಎಲ್ಲರೂ ಪಡೆಯಲೇಬೇಕು. ಈಗಿನಿಂದಲೆ ಲಸಿಕೆ ಪಡೆಯುವಂತೆ ಆರೋಗ್ಯ ಕಾರ್ಯಕರ್ತರಿಗೆ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.
ಓದಿ : ರಾಜ್ಯದಲ್ಲಿಂದು 380 ಮಂದಿಗೆ ಕೊರೊನಾ ದೃಢ: 8 ಸೋಂಕಿತರು ಬಲಿ
ಕೋವಿಡ್ ಲಸಿಕಾ ಅಭಿಯಾನದ ಎರಡನೇ ಡೋಸ್ ಫೆಬ್ರವರಿ 14 ರಿಂದ ಶುರುವಾಗಲಿದ್ದು, ಆರೋಗ್ಯ ಕಾರ್ಯಕರ್ತರು ಎಲ್ಲಿ ಬೇಕಾದರೂ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ಬಿ.ಎನ್. ರಜನಿ ಹೇಳಿದ್ದಾರೆ. ಮೊದಲಿನಂತೆ ಸೂಚಿಸಿದ ಕೇಂದ್ರದಲ್ಲೇ ಡೋಸೆಜ್ ಪಡೆಯಬೇಕು ಎಂಬ ನಿಯಮ ತೆಗೆದು ಹಾಕಲಾಗುವುದು. ಕೇಂದ್ರದಿಂದ ಈಗಾಗಲೇ ಆದೇಶವಾಗಿದ್ದು, ಮೊದಲ ಹಂತದ ಡೋಸೇಜ್ ಪಡೆಯದ ಆರೋಗ್ಯ ಕಾರ್ಯಕರ್ತರಿಗೆ ಫೆಬ್ರವರಿ ಅಂತ್ಯದೊಳಗೆ ಮುಗಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಎರಡನೇ ಡೋಸೆಜ್ಗೆ ಕೋವಿಡ್ ಶೀಲ್ಡ್ ವ್ಯಾಕ್ಸಿನ್ ಬರುತ್ತಲೇ ಇದೆ. ಯಾವುದೇ ಸಿರಿಂಜ್ ಸಮಸ್ಯೆಯಾಗಲಿ ಇಲ್ಲ ಎಂದು ತಿಳಿಸಿದರು.