ಬೆಂಗಳೂರು: ಎರಡನೇ ಉಪಲೋಕಾಯುಕ್ತರ ನೇಮಕ ಸಂಬಂಧಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಎರಡು ಉಪಲೋಕಾಯುಕ್ತ ಹುದ್ದೆಗಳ ಪೈಕಿ ಒಂದು ಹುದ್ದೆ ಭರ್ತಿಯಾಗಿರುವುದರಿಂದ ಅವರಿಗೆ ಕಾರ್ಯಭಾರ ಹೆಚ್ಚಿದೆ. ಹೀಗಾಗಿ, ಇನ್ನೊಂದು ಉಪಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಬೇಕು ಎಂದು ಕೋರಿ ವಕೀಲ ಬಸವರಾಜ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ಪ್ರಸ್ತಾಪಿಸಿದರು.
ವಿರೋಧ ಪಕ್ಷದ ನಾಯಕರ ನೇಮಕವಾಗದಿದ್ದರಿಂದ ಉಪಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಪ್ರಕ್ರಿಯೆ ಆರಂಭವಾಗಿದೆ ಎಂದು ಸರ್ಕಾರದ ವಕೀಲರು ಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಫೆಬ್ರುವರಿಗೆ ಮುಂದೂಡಿತು.
ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್, ಎರಡು ಉಪ ಲೋಕಾಯುಕ್ತ ಹುದ್ದೆಗಳ ಪೈಕಿ ಒಂದರಲ್ಲಿ ನಿವೃತ್ತ ನ್ಯಾ. ಕೆ ಎನ್ ಫಣೀಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂಓದಿ:ಮಲಗುಂಡಿ ಸ್ವಚ್ಛತೆಗೆ ತಳ ಸಮುದಾಯದವರ ಬಳಕೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್