ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮೊದಲ ದಿನದ ವೀಕೆಂಡ್ ಕರ್ಫ್ಯೂ ಯಶಸ್ವಿಯಾದ ಬೆನ್ನಲ್ಲೇ ಎರಡನೇ ದಿನವೂ ರಾಜಧಾನಿಯಲ್ಲಿ ಜನರು ಉತ್ತಮ ಬೆಂಬಲ ನೀಡಿದ್ದಾರೆ.
ನಗರದ ಮುಖ್ಯರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು ಜನ, ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಅನಗತ್ಯ ಓಡಾಟ ನಡೆಸಿದರೆ ಲಾಠಿ ಮೂಲಕ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದಾರೆ. ಈಗಾಗಲೇ ಬೈಕ್ ನಲ್ಲಿ ಓಡಾಡುವರಿಗೆ ಕಾರಣ ಕೇಳಿ ಎಚ್ಚರಿಕೆ ನೀಡಲಾಗುತ್ತಿದೆ.
ಔಷಧ ಮಳಿಗೆ ಹೊರತುಪಡಿಸಿ ನಗರ ಲಾಕ್:
ಮೇ 4 ರವರೆಗೆ ಕೋವಿಡ್ ತಡೆಗೆ ವಿಧಿಸಿರುವ ಮಾರ್ಗಸೂಚಿ ಪ್ರಕಾರ, ಇಂದು ಬೆಳಿಗ್ಗೆ 10ರ ನಂತರ ನಗರದ ಔಷಧ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಮಳಿಗೆಗಳು ಬಂದ್ ಆಗಿವೆ. ಸರ್ಕಾರದ ಆದೇಶದ ಪ್ರಕಾರ ವಾರಾಂತ್ಯ (ಶನಿವಾರ ಹಾಗೂ ಭಾನುವಾರ) ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ದಿನಸಿ ಹಾಗೂ ಹಾಲಿನ ಅಂಗಡಿ ತೆರೆಯಲು ಅವಕಾಶವಿದೆ. ಈ ಪ್ರಕಾರ ಇಂದು ನಗರದ ಎಲ್ಲಾ ಮಳಿಗೆಗಳು ಬಂದ್ ಆಗಿವೆ. ನಾಳೆ ಅಗತ್ಯ ಸೇವೆಗಳ ಅಂಗಡಿಗಳನ್ನು ಬಿಟ್ಟರೆ ಬೇರೆ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ.
ಪೊಲೀಸರಿಂದ ಕಠಿಣ ಕ್ರಮ:
ಬೆಳಗ್ಗೆ 10 ಗಂಟೆ ಬಳಿಕ ಹೊಯ್ಸಳ ಪೊಲೀಸರು ಸೈರನ್ ಮೊಳಗಿಸಿ ಧ್ವನಿವರ್ಧಕಗಳ ಮೂಲಕ ವ್ಯಾಪಾರ ವಹಿವಾಟು ಮುಚ್ಚಿಸಿದರು. ನಗರದ ಎಲ್ಲಾ ಪ್ಲೈ ಓವರ್ಗಳ ಮೇಲೆಯೂ ಬ್ಯಾರಿಕೇಡ್ ಹಾಕಲಾಗಿದೆ. 70ಕ್ಕಿಂತ ಹೆಚ್ಚು ಮುಖ್ಯ ರಸ್ತೆಗಳನ್ನು ಏಕಮುಖ ರಸ್ತೆಯನ್ನಾಗಿ ಮಾರ್ಪಡಿಸಲಾಯಿಗಿದೆ. ಅಲ್ಲದೆ, ನಗರಕ್ಕೆ ಸಂಪರ್ಕಿಸುವ ಗಡಿ ಪ್ರದೇಶಗಳಲ್ಲಿನ ಚೆಕ್ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ತುಮಕೂರು ರಸ್ತೆ, ಹೊಸೂರು ರೋಡ್ ಹಾಗೂ ಏರ್ ಪೋರ್ಟ್ ಹಾಗೂ ಹಳೆಮದ್ರಾಸ್ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು. ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನ ಸವಾರರ ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.
ಮಾಂಸ ಖರೀದಿ:
ಇನ್ನೊಂದೆಡೆ ಅನೇಕ ಕಡೆಗಳಲ್ಲಿ ಜನರು ಮಾಂಸ ಖರೀದಿಸುವ ಭರದಲ್ಲಿ ಸಾಮಾಜಿಕ ಅಂತರ ಮರೆತಿದ್ದರು. ನಿಗದಿತ ಸಮಯ ನೀಡಿದ್ದರಿಂದ ಮಾಂಸ ತೆಗೆದುಕೊಳ್ಳಲು ಮಾಸ್ಕ್ ಧರಿದ್ದರೂ ಕೂಡ ಸಾಮಾಜಿಕ ಅಂತರವಿರಲಿಲ್ಲ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು: ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಸಾವು