ಬೆಂಗಳೂರು: ಮಹಾನಗರಿ ಬೆಂಗಳೂರು ದಿನೇ ದಿನೆ ಬೆಳೆಯುತ್ತಿದ್ದು, ಹೊಸ ಲೇಔಟ್ಗಳನ್ನು ಮಾಡಬೇಕಿದೆ, ಪ್ಲಾನ್ ಮಾಡಬೇಕು, ಜಾಗಗಳನ್ನು ಗುರುತಿಸಿ ಭೂಸ್ವಾಧೀನ ಮಾಡಬೇಕು. ಇದಕ್ಕಾಗಿ ಜಾಗ ಗುರುತಿಸುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಡಿಎ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಧಾನಿಯಲ್ಲಿ ಹೊಸ ಲೇಔಟ್ ನಿರ್ಮಾಣದ ಅಗತ್ಯತೆ ಇದೆ, ಇದನ್ನು ಸರ್ಕಾರ ಗಮನಿಸಿದೆ, ಬಿಡಿಎ ಮೂಲಕ ಹೊಸ ಬಡಾವಣೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ, ಈಗಾಗಲೇ ಜಾಗ ಗುರುತಿಸುವ ಕಾರ್ಯಕ್ಕೆ ಸೂಚಿಸಿದ್ದು, ಸೂಕ್ತ ಜಾಗ ಸಿಕ್ಕ ನಂತರ ಅಗತ್ಯ ಯೋಜನೆ ರೂಪಿಸಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಹೊಸ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಬಿಡಿಎದಲ್ಲಿ ಹಣವಿಲ್ಲ ಎನ್ನುವ ಆರೋಪ ಸರಿಯಲ್ಲ, ಬಿಡಿಎ ಲಾಭದಾಯಕ ಉದ್ಯಮ ಸಂಸ್ಥೆಯಲ್ಲ. ಬೇರೆಯವರು ಲೇಔಟ್ ಮಾಡುವ ಮುನ್ನ ಯೋಜನೆಗೆ ಅನುಮತಿ ಸಿಕ್ಕ ತಕ್ಷಣವೇ ಗ್ರಾಹಕರಿಂದ 10%- 20% ಹಣವನ್ನು ಪಡೆಯುತ್ತಾರೆ. ಇವರು ಲೇಔಟ್ ನಂತರ ಹಣ ಪಡೆಯುತ್ತಿದ್ದಾರೆ. ಬಿಡಿಎ ಎಂದಿಗೂ ರಿಯಲ್ ಎಸ್ಟೇಟ್ ಸಂಸ್ಥೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಡಿಎ ಮುಖ್ಯಸ್ಥ ಸ್ಥಾನಕ್ಕೆ ಎನ್.ಎ ಹ್ಯಾರಿಸ್ ಅವರ ಹೆಸರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, “ನಿಗಮ, ಮಂಡಳಿ ಪಟ್ಟಿಗೆ ಮುಖ್ಯಮಂತ್ರಿಗಳು ಸಹಿ ಹಾಕಬೇಕಿದೆ. ಬಿಡಿಎ ಮುಖ್ಯಸ್ಥರು ಹಾಗೂ ಆಯುಕ್ತರ ಕುರ್ಚಿಯಲ್ಲಿ ಇವರು ಕೂತಿದ್ದಾರೆ ಎಂದು ರಾಕೇಶ್ ಸಿಂಗ್ ಅವರ ಕಡೆ ತೋರಿಸಿದರು.
ಜಯನಗರ, ಮಲ್ಲೇಶ್ವರಂ ಬಿಟ್ಟರೆ ಶಿವರಾಮ ಕಾರಂತ ಉತ್ತಮ ಬಡವಾಣೆ: ಶಿವರಾಮ ಕಾರಂತ ಬಡಾವಣೆ ನಿವೇಶನ ದರ ಸ್ವಲ್ಪ ದುಬಾರಿಯಾಯಿತಲ್ಲವೇ ಎಂದು ಕೇಳಿದಾಗ, “ನಾವು ಲಾಭ ಮಾಡಲು ಹೊರಟಿಲ್ಲ. ಖಾಸಗಿಯವರು ಲೇಔಟ್ ಮಾಡಿದರೆ 55% ನಿವೇಶನಕ್ಕೆ ಸಿಗುತ್ತದೆ. ನಾವು ಮಾಡಿರುವ ಲೇಔಟ್ ನಲ್ಲಿ 42% ಮಾತ್ರ ನಿವೇಶನಗಳಾಗಿವೆ. ನಾವು ದೊಡ್ಡ ರಸ್ತೆಗಳು, ದೊಡ್ಡ ಪವರ್ ಸ್ಟೇಷನ್, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ನನ್ನ ಅನುಭವದಲ್ಲಿ ಜಯನಗರ, ಮಲ್ಲೇಶ್ವರಂ ನಂತರ ಅತಿ ಸುಸಜ್ಜಿತ ಹಾಗೂ ಅತ್ಯುತ್ತಮ ಯೋಜಿತ ಲೇಔಟ್ ಎಂದರೆ ಅದು ಶಿವರಾಮ್ ಕಾರಂತ ಲೇಔಟ್. ಈ ಭಾಗದ ರೈತರು ಪುಣ್ಯವಂತರು” ಎಂದರು.
ಪಿಪಿಪಿ ಮಾದರಿಯಲ್ಲಿ ಬಿಡಿಎ ಕಾಂಪ್ಲೆಕ್ಸ್: ಬಿಡಿಎ ಕಾಂಪ್ಲೆಕ್ಸ್ ಗಳನ್ನು ಪಿಪಿಪಿ ಮಾದರಿಯಲ್ಲಿ ಮಾಡುವ ಪ್ರಸ್ತಾಪದ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರದಲ್ಲೇ ಈ ಪ್ರಸ್ತಾವನೆ ಇತ್ತು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಬಾಕಿ ಉಳಿದಿತ್ತು. ನಾನು ಈ ಫೈಲ್ ಗಳನ್ನು ಕ್ಲಿಯರ್ ಮಾಡುತ್ತಿದ್ದೇನೆ. ಒಂದೊಂದು ದಿನ ತಡವಾದರೂ ಸರ್ಕಾರಕ್ಕೆ ನಷ್ಟವಾಗುತ್ತದೆ. ಎಲ್ಲವನ್ನು ಕ್ಲಿಯರ್ ಮಾಡಿ ಕಟ್ಟಡ ತೆರವುಗೊಳಿಸಿ ಕೆಲಸ ಶುರು ಮಾಡಿ ಸರ್ಕಾರಕ್ಕೆ ಏನು ನೀಡಬೇಕೋ ಅದನ್ನು ನೀಡಲು ತಿಳಿಸಿದ್ದೇನೆ. ಇದರ ಅನುಪಾತವನ್ನು ನಾವು ಬದಲಿಸಿಲ್ಲ. ಈ ಹಿಂದೆ ಏನಿತ್ತೋ ಅದನ್ನೇ ಮುಂದುವರಿಸಲಾಗಿದೆ” ಎಂದು ತಿಳಿಸಿದರು.
ಬಿಬಿಸಿ ರಸ್ತೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ ಬಹಳ ಗೊಂದಲವಾಗುತ್ತಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, “ರೈತರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂದಿದ್ದೇವೆ. ಅವರನ್ನು ಕರೆಸಿ ಮಾತನಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೊಸದಾಗಿ ಹಣ ನೀಡುವಂತಿಲ್ಲ. ಹೀಗಾಗಿ ರೈತರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
ಕೆಂಪೇಗೌಡ ಲೇಔಟ್ ಜಾಗದ ಕೋರ್ಟ್ ಕೇಸ್ ಬಗ್ಗೆ ಕೇಳಿದಾಗ, “ಈ ಪ್ರಕರಣಗಳಲ್ಲಿ ಯಾರು ಸರ್ಕಾರದ ಪರ ಕೆಲಸ ಮಾಡದ ವಕೀಲರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಲಾಗುವುದು” ಎಂದು ತಿಳಿಸಿದರು. ಪರ್ಯಾಯ ನಿವೇಶನದ ಬಗ್ಗೆ ಕೇಳಿದಾಗ, ನಾನು ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಜನರನ್ನು ಭೇಟಿ ಮಾಡಿದಾಗ ಶೇ. 25 ರಷ್ಟು ಜನ ಪರ್ಯಾಯ ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ. ಅವುಗಳನ್ನು ನೋಂದಣಿ ಮಾಡಿಸಿದ್ದು, ಕಾನೂನು ಪ್ರಕಾರವಾಗಿ ಯಾವುದನ್ನು ಬಗೆಹರಿಸಬಹುದೋ ಅದನ್ನು ಬಗೆಹರಿಸಲು ಸೂಚಿಸಲಾಗುವುದು” ಎಂದರು.
ಇದನ್ನೂ ಓದಿ: ಎಲ್ಲವನ್ನೂ ವರಿಷ್ಠರು ತೀರ್ಮಾನ ಮಾಡ್ತಾರೆ: ಸಚಿವ ಕೃಷ್ಣ ಬೈರೇಗೌಡ