ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಕಳೆದ ವರ್ಷ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ 'ಶಾಲಾ ಸಂಪರ್ಕ ಸೇತು ಯೋಜನೆ'ಯನ್ನು ಘೋಷಿಸಿದ್ದರು. ಇದೀಗ ಕರಾವಳಿ, ಮಲೆನಾಡಿನ ಹಲವೆಡೆ ಶಾಲಾ ಸಂಪರ್ಕ ಸೇತುವೆಗಳು ನಿಧಾನವಾಗಿ ತಲೆ ಎತ್ತುತ್ತಿವೆ. ಅವುಗಳ ಕುರಿತು ಲೋಕೋಪಯೋಗಿ ಸಚಿವ ರೇವಣ್ಣ ಮಾಹಿತಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಮಾನ್ಸೂನ್ ಮಳೆಗೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಳು. ಈ ಘಟನೆ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿತ್ತು. ಅಂದು ಸಿಎಂ ಕುಮಾರಸ್ವಾಮಿ ಘಟನೆಯ ಗಂಭೀರತೆ ಅರಿತು ಅಲ್ಲಿಯೇ ಎರಡು ದಿನ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಆ ಸಂದರ್ಭದಲ್ಲೇ ಹುಟ್ಟಿಕೊಂಡಿದ್ದು, ಶಾಲಾ ಸಂಪರ್ಕ ಸೇತು ಯೋಜನೆ. ಕರಾವಳಿ ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ಕಿರು ಸೇತುವೆಗಳಿಲ್ಲದೆ ವಿದ್ಯಾರ್ಥಿಗಳು ಅಪಾಯಕಾರಿಯಾದ ಹಳ್ಳ, ಕೊಳ್ಳಗಳನ್ನು ದಾಟಿ ಶಾಲೆಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ಮನಗಂಡ ಸಿಎಂ ಮುಂದಿನ ಮಳೆಗಾಲದ ಒಳಗೆ ಆದ್ಯತೆ ಮೇರೆಗೆ ಶಾಲಾ ಸಂಪರ್ಕ ಸೇತು ನಿರ್ಮಿಸಲು ಆದೇಶ ನೀಡಿದ್ದರು. ಇದೀಗ ಮಾನ್ಸೂನ್ ಪ್ರಾರಂಭವಾಗುತ್ತಿದ್ದು, ಹಲವೆಡೆ ಕಿರು ಸೇತುವೆಗಳು ನಿರ್ಮಾಣವಾಗುತ್ತಿವೆ ಎಂದರು.
ಪ್ರಗತಿಯಲ್ಲಿ ಶಾಲಾ ಸಂಪರ್ಕ ಸೇತು ನಿರ್ಮಾಣ:
ಲೋಕೋಪಯೋಗಿ ಇಲಾಖೆ ಶಾಲಾ ಸಂಪರ್ಕ ಸೇತು ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ರಾಜ್ಯಾದ್ಯಂತ ಸುಮಾರು 643 ಸಂಪರ್ಕ ಸೇತು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅಂದಾಜು 186 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಇಲಾಖೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಹೆಚ್ಚಾಗಿ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಿರು ಸೇತುವೆ ನಿರ್ಮಿಸಲಾಗುತ್ತಿದೆ. ಈ ಪೈಕಿ ಬಹುತೇಕ ಕಡೆ ಕಾಲು ಸೇತುವೆ ನಿರ್ಮಾಣವಾಗಿದೆ. ಇನ್ನು ಕೆಲವೆಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದ್ಯತೆ ಮೇರೆಗೆ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದರು.
ತೀರ್ಥಹಳ್ಳಿಯಲ್ಲಿ ಸುಮಾರು 32 ಸೇತುವೆ ನಿರ್ಮಿಸಲಾಗುತ್ತಿದೆ. ಇನ್ನು ದ.ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಸುಮಾರು 28 ಶಾಲಾ ಸಂಪರ್ಕ ಸೇತುವೆಗಳು ತಲೆ ಎತ್ತಿವೆ. ತಲಾ 15 ಲಕ್ಷ ರೂ. ವೆಚ್ಚದಲ್ಲಿ ಪಾದಚಾರಿಗಳು ಹಾಗೂ ತ್ರಿಚಕ್ರ ವಾಹನ ಸಂಚಾರಕ್ಕೆ ಅನುವಾಗುವಂತೆ 1 ರಿಂದ 3 ಮೀಟರ್ ಅಗಲದಲ್ಲಿ ಸೇತುವೆ ವಿನ್ಯಾಸ ರೂಪಿಸಲಾಗುತ್ತಿದೆ. ಇನ್ನು ಭಾರಿ ವಾಹನಗಳು ಸಂಚರಿಸದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿರ್ಬಂಧಕ ಅಳವಡಿಸಲಾಗುತ್ತಿದೆ. ಸೇತುವೆ ನಿರ್ಮಾಣಕ್ಕೆ ಮುನ್ನ ಸ್ಥಳೀಯರು, ಶಾಲಾಭಿವೃದ್ಧಿ ಸಮಿತಿ, ಅರಣ್ಯ ಹಾಗೂ ಕಂದಾಯ ಇಲಾಖೆ ಪ್ರತಿನಿಧಿಗಳ ಜತೆಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಎಲ್ಲೆಲ್ಲಿ ಎಷ್ಟು ಶಾಲಾ ಸಂಪರ್ಕ ಸೇತು?:
ಸುಮಾರು 643 ಸಂಪರ್ಕ ಸೇತುವೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 186 ಕೋಟಿ ರೂ. ಮೀಸರಿಸಲಾಗಿದೆ. ಸುಮಾರು 70-80 ಶೇ. ಭಾಗದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದರು.