ಬೆಂಗಳೂರು: ಮದ್ಯದ ಅಮಲಿನಲ್ಲಿ ಶಾಲಾ ವಾಹನ ಚಲಾಯಿಸಿದ ಚಾಲಕ ಅಪಘಾತವೆಸಗಿ ಪಾದಚಾರಿಯ ಪ್ರಾಣ ತೆಗೆದ ಘಟನೆ ಅಕ್ಟೋಬರ್ 10ರಂದು ದೊಡ್ಡಬಾಣಸವಾಡಿಯಲ್ಲಿ ನಡೆದಿದೆ. ಆಂಜಿನಪ್ಪ ಎಂಬವರು ಸಾವನ್ನಪ್ಪಿದ್ದಾರೆ.
ವಿವರ: ಅ.10ರ ಮಧ್ಯಾಹ್ನ 12:30ರ ಸುಮಾರಿಗೆ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿದ್ದ ಖಾಸಗಿ ಶಾಲಾ ಬಸ್ ಅನ್ನು ಸುಭಾಷ್ ಚಲಾಯಿಸುತ್ತಿದ್ದರು. ಬಸ್ ದೊಡ್ಡಬಾಣಸವಾಡಿ ಸಮೀಪ ಬರುತ್ತಿತ್ತು. ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ನಂತರ ಮೆಡಿಕಲ್ ಶಾಪ್‌ನಿಂದ ಮನೆಗೆ ತೆರಳುತ್ತಿದ್ದ ಆಂಜಿನಪ್ಪ ಎಂಬವರಿಗೂ ಗುದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 11ರಂದು ಆಂಜಿನಪ್ಪ ಸಾವನ್ನಪ್ಪಿದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುಭಾಷ್ನನ್ನು ಬಂಧಿಸಲಾಗಿದೆ. ಬಸ್ ಚಲಾಯಿಸುವಾಗ ಚಾಲಕ ಕಂಠಪೂರ್ತಿ ಕುಡಿದಿದ್ದ ಎಂದು ವೈದ್ಯಕೀಯ ತಪಾಸಣೆಯಲ್ಲಿ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ಡಿಕ್ಕಿ: ಓವರ್ ಟೇಕ್ ವೇಳೆ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಯಲಹಂಕದಲ್ಲಿ ಅ.5ರಂದು ನಡೆದಿತ್ತು. ಅವಘಡದಲ್ಲಿ ಸ್ಕೂಟರ್ ಸವಾರ ಭರತ್ ರೆಡ್ಡಿ ಸಾವನ್ನಪ್ಪಿದ್ದಾರೆ. ಘಟನೆ ದಿನ ಸಂಜೆ 5 ಗಂಟೆ ಸುಮಾರಿಗೆ ಭರತ್ ಅಟ್ಟೂರು ಕಡೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದರು. ಕಿರಿದಾದ ರಸ್ತೆಯಲ್ಲಿ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದರು. ಈ ವೇಳೆ, ಬಸ್ಗೆ ವಾಹನ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿತ್ತು.
ಮೀನು ಸಾಗಾಟ ವಾಹನ ಅವಘಾತ: ಮೀನು ಸಾಗಾಟ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವಾಹನ ಸವಾರ ಸಾವನ್ನಪ್ಪಿರುವ ಘಟನೆ ಬಧವಾರ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿತ್ತು. ಮೃತ ಯುವಕನನ್ನು ಉಳ್ಳಾಲ ಕೋಟೆಕಾರ್ ನಿವಾಸಿ ಅಝ್‌ವೀನ್ (21)ಎಂದು ಗುರುತಿಸಲಾಗಿದೆ.
ಅಝ್‌ವೀನ್ ಘಟನೆ ದಿನ ಬೆಳಗ್ಗೆ 3:30ರ ಸುಮಾರಿಗೆ ಬೈಕ್ನಲ್ಲಿ ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯ ಮುಂಭಾಗದಲ್ಲಿ ಚಲಿಸುತ್ತಿದ್ದ ಮೀನು ಸಾಗಣೆ ವಾಹನದ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಹಿಂದಿನಿಂದ ಮೀನು ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಝ್ವೀನ್ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ಐವರು ಕೂಲಿಕಾರ್ಮಿಕರ ಸಾವು, 11 ಜನರಿಗೆ ಗಾಯ