ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆನ್ಲೈನ್ ಥಿಯರಿ ಕ್ಲಾಸ್ ಹಾಗೂ ಕೆ-ಸಿಇಟಿ, ನೀಟ್, ಐಐಟಿ, ಜೆಇಇ ಮತ್ತು ಇತರ ಪ್ರವೇಶ ಪರೀಕ್ಷೆಗಳಿಗೆ ಸ್ಕಾಲರ್ ವಿಂಗ್ ಆ್ಯಪ್ (Scholars wing app) ಮೂಲಕ ಉಚಿತ ಆನ್ಲೈನ್ ತರಬೇತಿ ಪಡೆಯಬಹುದಾಗಿದೆ.
ಕೋವಿಡ್-19ನಿಂದ ಶಾಲಾ-ಕಾಲೇಜುಗಳು ನಡೆಸದಿರುವ ಕಾರಣ ದ್ವಿತೀಯ ಪಿಯುಸಿ (ವಿಜ್ಞಾನ) ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಥಿಯರಿ ಕ್ಲಾಸ್, 2ಡಿ, 3ಡಿ ಅನಿಮೇಷನ್ ಹಾಗೂ ಕೆಸಿಇಟಿ, ಎನ್ಇಇಟಿ, ಐಐಟಿ-ಜೆಇಇ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲು ಕಲರ್ ಸ್ಟೋನ್ಸ್ ಕ್ರಿಯೇಟಿವ್ ಸ್ಟೂಡಿಯೋಸ್ ಎಲ್ಎಲ್ಪಿ ಬೆಂಗಳೂರು ಸಂಸ್ಥೆಯವರು ಸಿದ್ಧಪಡಿಸುವ ಪ್ರಿಲೋಡೆಡ್ಅನ್ನು ಸ್ಕಾಲರ್ ವಿಂಗ್ ಆ್ಯಪ್ ಮುಖಾಂತರ ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ.
ಪಿಯು ಇಲಾಖೆ ಈ ಆ್ಯಪ್ಅನ್ನು ವಿಷಯ ತಜ್ಞರಿಂದ ಮೌಲ್ಯಮಾಪನ ಮಾಡಿಸಿದ್ದು, ಸದ್ಯ ಆ್ಯಪ್ನಲ್ಲಿರುವ ಪಠ್ಯ, ಪಠ್ಯದ ನಿರೂಪಣೆ, ಅಗತ್ಯತೆ ಸೂಕ್ತತೆ, ಬಳಸಿದ ಭಾಷೆ, ಬಳಸಲಾಗಿರುವ ಅನಿಮೇಷನ್‌ಗಳು ಸೂಕ್ತವಾಗಿವೆ. ಪಠ್ಯಕ್ಕೆ ಸಂಬಂಧಿಸಿದ ಮೂರು ಹಂತದ ಆಯ್ಕೆ ಪ್ರಶ್ನೆಗಳು ಹಾಗೂ ಅವುಗಳ ವಿಡಿಯೋ ವಿವರಣೆ ಲಭ್ಯವಿರಲಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಸಿಇಟಿ, ಎನ್ಇಇಟಿ, ಐಐಟಿ-ಜೆಇಇ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ಪದವಿ ಪೂರ್ವ ಶಿಕ್ಷಣ ವ್ಯಾಪ್ತಿಯ ಎಲ್ಲಾ ಪ್ರಾಂಶುಪಾಲರು, ಉಪನ್ಯಾಸಕರು ಮೊದಲು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ನಂತರ ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ವಿಜ್ಞಾನ ವಿಭಾಗ) ಉಚಿತವಾಗಿ ಪ್ರೀ ಲೋಡೆಡ್ ಮುಖಾಂತರ ತರಬೇತಿ ಪಡೆಯಲು ವಿದ್ಯಾರ್ಥಿಗಳು ಸಹ ತಮ್ಮ ಮೊಬೈಲ್ನಲ್ಲಿ ಅಥವಾ ಟ್ಯಾಬ್, ಕಂಪ್ಯೂಟರ್ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕಲರ್ ಸ್ಟೋನ್ಸ್ ಕ್ರಿಯೇಟಿವ್ ಸ್ಟುಡಿಯೋಸ್ ಈ ತರಬೇತಿಯನ್ನು ಉಚಿತವಾಗಿ ನೀಡುವ ಸಂಪೂರ್ಣ ಜವಾಬ್ದಾರಿ ಸಂಸ್ಥೆಗೆ ಸೇರಿದೆ. ತರಬೇತಿಗೆ ನಿಯೋಜಿಸಲ್ಪಡುವ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಗಳನ್ನು ಸಂಸ್ಥೆ ಪಡೆಯುವಂತಿಲ್ಲ. ಆ್ಯಪ್‌ನ ಬಳಕೆ ಸಂಪೂರ್ಣವಾಗಿ ಉಚಿತವಾಗಿ ನೀಡಬೇಕಾಗಿದ್ದು, ನಂತರದ ಹಂತಗಳಲ್ಲಿಇಲಾಖೆಯಿಂದಾಗಲಿ ಅಥವಾ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ಸಂಸ್ಥೆಯು ಪಡೆಯುವಂತಿಲ್ಲ. ವಿದ್ಯಾರ್ಥಿಗಳ ಕಾಲೇಜಿನ ಅವಧಿಯ ನಂತರ ತರಬೇತಿ ಅವಧಿಯನ್ನು ನಿಗದಿಗೊಳಿಸಿ, ಕಾಲೇಜಿನ ಪಾಠಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಸ್ಥೆ ಹಾಗೂ ಅಧಿಕಾರಿಗಳು ಸಮನ್ವಯದೊಂದಿಗೆ ಕ್ರಮ ವಹಿಸಲಿದ್ದಾರೆ.