ಬೆಂಗಳೂರು : ಮನೆ ಬಾಡಿಗೆಗೆ ಪಡೆದು ಸರಿಯಾಗಿ ಬಾಡಿಗೆಯನ್ನೂ ನೀಡದೆ. ಇನ್ನೊಂದೆಡೆ ಮನೆ ಖಾಲಿ ಮಾಡುವಂತೆ ನ್ಯಾಯಾಲಯದ ಆದೇಶವನ್ನು ಪಾಲಿಸದೆ, ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಯ ಸದಸ್ಯರೊಬ್ಬರು ಮನೆ ಮಾಲೀಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯಿದೆ (ಎಸ್ಸಿ, ಎಸ್ಟಿ)ಯಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿದೆ.
ರೇಖಾ ಸಾಯಣ್ಣವರ್ ಎಂಬುವರು ನೀಡಿರುವ ದೂರಿನ ಸಂಬಂಧ ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಪಡಿಸುವಂತೆ ಕೋರಿ ಮನೆ ಮಾಲೀಕರಾದ ವಿ. ಜಗದೀಶ್ ಭತೀಜಾ ಮತ್ತು ಬೃಂದಾ ಭತೀಜಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮನೆ ಖಾಲಿ ಮಾಡಿಸಲು ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಲು ನೀಡಿರುವ ದೂರಾಗಿದೆ. ಈ ಪ್ರಕರಣವನ್ನು ಮುಂದುವರೆಸಿದಲ್ಲಿ ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಂತಾಗಲಿದೆ ಎಂದು ತಿಳಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ದೂರು ನೀಡಿರುವವರು ಅರ್ಜಿದಾರರ ಮನೆಯಲ್ಲಿ ಬಾಡಿಗೆದಾರರಾಗಿದ್ದೂ ಈ ಸಂಬಂಧ 2018ರಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಈವರೆಗೂ ಬಾಡಿಗೆ ಪಾವತಿ ಮಾಡಿರುವುದಿಲ್ಲ. ಸಿವಿಲ್ ನ್ಯಾಯಾಲಯ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಆದರೂ ದೂರುದಾರರು ಮನೆ ಖಾಲಿ ಮಾಡುವುದಕ್ಕೆ ನಿಗದಿ ಪಡಿಸಿದ್ದ ಕೊನೆಯ ದಿನದಂದೇ ಮೂರು ದಿನಗಳ ಹಿಂದೆ ದೌರ್ಜನ್ಯ ನಡೆದಿದೆ ಎಂದು ದೂರು ನೀಡಲಾಗಿದೆ.
ಅರ್ಜಿದಾರರು ದೂರುದಾರರ ವಿರುದ್ಧ ದೌಜನ್ಯ ನಡೆಸಿದ್ದೇ ಆದಲ್ಲಿ ಘಟನೆ ನಡೆದ ದಿನದಂದೇ ದೂರು ನೀಡಬಹುದಾಗಿತ್ತು. ಮೂರು ದಿನಗಳ ಕಾಲ ವಿಳಂಬವಾಗಿ ದೂರು ನೀಡುವ ಅಗತ್ಯವಿರಲಿಲ್ಲ. ಈ ವಿಳಂಬ ದೂರಿನ ಸಾರಾಂಶವನ್ನು ದುರ್ಬಲಗೊಳಿಸಲಿದೆ ಎಂದು ತಿಳಿಸಿರುವ ನ್ಯಾಯಪೀಠ, ಇದೊಂದು ಸೇಡಿದ ಪ್ರಕರಣ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಸಾರ್ವಜನಿಕರ ಮುಂದೆ ನಿಂದನೆ ಮಾಡಿರಬೇಕು : ದೂರುದಾರರು ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯರಾಗಿದ್ದು, ಅವರು ಹಕ್ಕುಗಳ ಕುರಿತು ತಿಳಿದುಕೊಂಡಿರುತ್ತಾರೆ. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್ ೩(೧)(ಆರ್) ಪ್ರಕಾರ ದೌರ್ಜನ್ಯವು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂಬುದಾಗಿ ಹೇಳಲಾಗಿದೆ. ಆದರೆ, ಈ ಪ್ರಕರಣದಲ್ಲಿ ಮನೆಯಲ್ಲಿ ಬಂದು ದೌರ್ಜನ್ಯ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಾನು ಮನೆಯಲ್ಲಿದ್ದೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ. ಈ ಪ್ರಕರಣದಲ್ಲಿ ದೌಜನ್ಯ ಎಸಗಿರುವುದು ಸಾರ್ವಜನಿಕ ಸ್ಥಳದಲ್ಲಿ ಅಲ್ಲ ಎಂಬುದು ತಿಳಿಯಲಿದೆ. ಹೀಗಾಗಿ ಪ್ರಕರಣ ಕ್ಷುಲ್ಲಕವಾಗಿದ್ದಾಗಿದೆ ಎಂದು ಪೀಠ ತಿಳಿಸಿದೆ. ಈ ರೀತಿಯ ಕ್ಷುಲ್ಲಕ ಪ್ರಕರಣಗಳಿಂದಾಗಿ ವಾಸ್ತವವಾಗಿ ದೌಜನ್ಯಕೊಳಗಾದ ಜನ ನೀಡುವ ದೂರುಗಳು ಮರೆತು ಹೋಗಲಿವೆ ಎಂದು ಪೀಠ ಅಭಿಪ್ರಾಯ ಪಟ್ಟು ಪ್ರಕರಣವನ್ನು ರದ್ದು ಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ಪ್ರಕರಣದ ಅರ್ಜಿದಾರರು ನಗರದ ಡಾಲರ್ಸ್ ಕಾಲೋನಿಯ ಪೆಬ್ಬಲ್ ಬೇ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 42ರ ಮಾಲೀಕರಾಗಿದ್ದರು. ದೂರದಾರರು ಅರ್ಜಿದಾರರಿಂದ ಮನೆ ಬಾಡಿಗೆಗೆ ಪಡೆದುಕೊಂಡಿದ್ದರು. 10 ಲಕ್ಷ ರು.ಗಳು ಭದ್ರತಾ ಠೇವಣಿ ಮತ್ತು ಮಾಸಿಕ 16,461 ರೂ. ಗಳನ್ನು ಬಳಕೆದಾರರ ಮೊತ್ತವನ್ನಾಗಿ ಒಪ್ಪಂದ ಮಾಡಿಕೊಂಡಿದ್ದರು.
ಭದ್ರತಾ ಠೇವಣಿಗಾಗಿ 3 ಲಕ್ಷ ರೂ. ಗಳನ್ನು ಮತ್ತು 7 ಲಕ್ಷ ರೂ. ಎರಡು ಚೆಕ್‌ಗಳನ್ನು ನೀಡಿದ್ದರು. ಆದರೆ, 7 ಲಕ್ಷ ರೂ. ಗಳ ಚೆಕ್ ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಬೌನ್ಸ್ ಆಗಿತ್ತು. ಈ ಸಂಬಂಧ ಅರ್ಜಿದಾರರು ದೂರುದಾರರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದೂ ವಿಚಾರಣಾ ಹಂತದಲ್ಲಿದ್ದು, ದೂರುದಾರರು ಉಳಿದ ಹಣ ಮತ್ತು ಬಾಡಿಗೆ ಪಾವತಿ ಮಾಡುವಲ್ಲಿ ವಿಫಲವಾಗಿದ್ದರು. ಇದರಿಂದ 15,45,733 ರೂ. ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಅರ್ಜಿದಾರರು ದೂರುದಾರರಿಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೂ ಹಣ ಪಾವತಿ ಮಾಡಿರಲಿಲ್ಲ. ಇದರಿಂದ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಬಾಡಿಗೆ ವಸೂಲಿ ಮತ್ತು ಮನೆ ಖಾಲಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೂರು ತಿಂಗಳಲ್ಲಿ ಮನೆಯನ್ನು ಖಾಲಿ ಮಾಡಿ ಮಾಲೀಕರಿಗೆ (ಅರ್ಜಿದಾರರಿಗೆ) ಕೊಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ದೂರುದಾರರು ಈ ಆದೇಶವನ್ನು ಪಾಲನೆ ಮಾಡಿರಲಿಲ್ಲ. ಇದರಿಂದ ಎರಡನೇ ಅರ್ಜಿದಾರರಾದ (ಮನೆ ಮಾಲೀಕರ ಮಗಳು) ಎಕ್ಸಿಕ್ಯೂಷನ್ ಪಿಟಿಷನ್ (ಇಪಿ) ಸಲ್ಲಿಸಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಈ ಸಂಬಂಧ 2023 ರ ಮಾರ್ಚ್ 10 ರಿಂದ 2023ರ ಮಾರ್ಚ್ 29 ರ ಅಂತ್ಯದ ವೇಳೆಗೆ ಮನೆ ಖಾಲಿ ಮಾಡುವಂತೆ ವಾರಂಟ್ ಹೊರಡಿಸಲಾಗಿತ್ತು. ಅಲ್ಲದೇ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಮನೆ ಖಾಲಿ ಮಾಡಿರಲಿಲ್ಲ. ಈ ನಡುವೆ 2023 ರ ಮಾರ್ಚ್ 29 ರಂದು ದೂರುದಾರರು ಅರ್ಜಿದಾರರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಮುರುಘಾ ಮಠಕ್ಕೆ ಆಡಳಿತಾಧಿಕಾರ ನೇಮಕ ವಿಚಾರ: ಕೂಲಂಕಷವಾಗಿ ವಿಚಾರಣೆ ಅಗತ್ಯವೆಂದ ಹೈಕೋರ್ಟ್