ಬೆಂಗಳೂರು: ರೈಲ್ವೆ, ವಿಮೆ, ಪೆಟ್ರೋಲಿಯಂ ಉದ್ದಿಮೆಗಳ ಖಾಸಗಿಕರಣ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ 'ಭಾರತ ಉಳಿಸಿ ಆಂದೋಲನ'ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲ ಸೂಚಿಸಿದರು.
'ನಾವು ಭಾರತೀಯರು' ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಾರ್ವಜನಿಕ ಸಂಪತ್ತಾದ ರೈಲ್ವೆ, ವಿಮೆ, ಪೆಟ್ರೋಲಿಯಂ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ಕಾರ್ಪೊರೇಟ್ಗಳಿಗೆ ಕೊಡುವುದನ್ನು ನಿಲ್ಲಿಸಬೇಕು. ಕಾನೂನು ಬಾಹಿರವಾಗಿ ಬಂಧಿಸಿರುವ ಎಲ್ಲಾ ಜನಪರ ಚಿಂತಕರನ್ನು ಹಾಗೂ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ, ಕೆಲಸ ಕಳೆದುಕೊಂಡವರಿಗೆ ಏಪ್ರಿಲ್ನಿಂದ ಡಿಸೆಂಬರ್ ತನಕ ಪ್ರತೀ ತಿಂಗಳು 7,500 ರೂಪಾಯಿ ಪರಿಹಾರ ವೇತನ ನೀಡಬೇಕು. ಜನಸಾಮಾನ್ಯರಿಗೆ ಕೋವಿಡ್ ಚಿಕಿತ್ಸೆ ಉಚಿತ ಮಾಡಬೇಕು. ಪೌರಕಾರ್ಮಿಕರು, ಆಶಾ, ಪೊಲೀಸ್, ಸರ್ಕಾರಿ ಬಸ್ ಚಾಲಕರು, ನಿರ್ವಾಹಕರು ಎಲ್ಲರಿಗೂ ಆರೋಗ್ಯ ವಿಮೆ, ಭತ್ಯೆ ಹಾಗೂ ಸುರಕ್ಷಾ ಕವಚ ನೀಡಬೇಕು. ಎಲ್ಲಾ ಮಕ್ಕಳಿಗೂ ಉಚಿತ ಲ್ಯಾಪ್ಟಾಪ್ ನೀಡಿ ಆನ್ಲೈನ್ ಪಾಠಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಎಲ್ಲಾ ನಾಗರಿಕರ ಆರೋಗ್ಯ, ಆಹಾರ, ಉದ್ಯೋಗ, ಆದಾಯ, ಸ್ವಾತಂತ್ರ್ಯ, ಸುರಕ್ಷತೆಯನ್ನು ಸರ್ಕಾರ ಖಾತ್ರಿಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಗೆ ಸಾಥ್ ನೀಡಿ ಮಾತನಾಡಿದ ಕೆಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶವನ್ನು ರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ಕಾರ್ಮಿಕರು, ರೈತ ಮುಖಂಡರು ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ವ ಬಂದ ಮೇಲೆ ಕಾನೂನು ತಿದ್ದುಪಡಿ ಮಾಡಬೇಕಾದರೆ ಸರ್ಕಾರ, ಸಂಘಟನೆಗಳು ಸೇರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದವು. ಕೋವಿಡ್ ಬಳಿಕ ಸರ್ಕಾರ ಯಾರ ಗಮನಕ್ಕೂ ಬಾರದಂತೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಿ ವಿಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಗೇಣಿದಾರರಿಗೆ ಭೂಮಿ ಹಂಚುವಂತಹ ಕೆಲಸ ಮಾಡಿತು. ಈಗಿನ ಸರ್ಕಾರ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಬಂಡವಾಳಶಾಹಿಗಳಿಗೆ ನೆರವಾಗುವಂತೆ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾನೂನುಗಳನ್ನು ತರುತ್ತಿದೆ. ಹೀಗಾಗಿ ಕಾರ್ಮಿಕ ಸಂಘಟನೆಗಳ ಜೊತೆ ಕಾಂಗ್ರೆಸ್ ಯಾವತ್ತಿಗೂ ಬೆಂಬಲಕ್ಕೆ ಇರುತ್ತದೆ ಎಂದರು.