ಬೆಂಗಳೂರು: "ಯಾರೂ ಕೂಡ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ರಮೇಶ್ ಇರಬಹುದು, ಡಿಕೆಶಿ ಇರಬಹುದು, ಯಾರೇ ಆಗಲಿ, ಒಂದು ಲಿಮಿಟ್ನಲ್ಲಿ ಹೇಳಿಕೆ ನೀಡಿದರೆ ಒಳ್ಳೆಯದು. ಹೇಳಿಕೆ ನೀಡುವುದು ಆರೋಪ ಮಾಡುವುದು ದೊಡ್ಡದಲ್ಲ. ಆದರೆ ಅದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
"ರಮೇಶ್ ದೆಹಲಿ ಭೇಟಿ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು. ಕಾನೂನು ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಇದೆ" ಎಂದು ತಿಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಇದೀಗ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ.
ಸುದೀಪ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ನಟ ಸುದೀಪ್ ಕಾಂಗ್ರೆಸ್‌ಗೆ ಆಹ್ವಾನಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, "ಡಿ.ಕೆ.ಶಿವಕುಮಾರ್ ಅವರು ನಟ ಸುದೀಪ್‌ರನ್ನು ಭೇಟಿ ಆಗಿರಬಹುದು. ಅವರು ಪಕ್ಷಕ್ಕೆ ಬಂದರೆ ಸ್ವಾಗತ. ನಮ್ಮ ಸಿದ್ದಾಂತ ಒಪ್ಪಿ ಬರುವುದು ಅವರಿಗೂ ಹೈಕಮಾಂಡ್ಗೂ ಬಿಟ್ಟಿದ್ದು" ಎಂದರು.
"ಪಕ್ಷ ಸೇರ್ಪಡೆ ಆದರೆ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ನಾನು ಸುದೀಪ್ ಅವರನ್ನು ಸದ್ಯ ಭೇಟಿಯಾಗಿಲ್ಲ. ರಾಜ್ಯದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರುವುದಕ್ಕೆ ಸ್ವಲ್ಪ ಯೋಚನೆ ಮಾಡುತ್ತಾರೆ. ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಆದಂತೆ ನಮ್ಮಲ್ಲಿ ಆಗುವುದಿಲ್ಲ" ಎಂದು ಹೇಳಿದರು. "ಆ ರಾಜ್ಯಗಳು, ಬೇರೆ ಪಕ್ಷದವರಂತೆ ನಮ್ಮ ಪಕ್ಷ ಸ್ಟಾರ್ಗಳನ್ನು ಕರೆತಂದು ಯಾವತ್ತೂ ಪ್ರಚಾರ ಮಾಡಿಲ್ಲ. ಆದರೆ ಸುದೀಪ್ ಬಂದು ಪ್ರಚಾರದಲ್ಲಿ ತೊಡಗಿದರೆ ಸ್ವಾಗತಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ವೈದ್ಯರ ಪ್ರೈವೇಟ್ ಪ್ರ್ಯಾಕ್ಟೀಸ್‌ಗೆ ಕಡಿವಾಣ ಹಾಕಿ: ಆಡಳಿತ ಸುಧಾರಣಾ ಆಯೋಗದ ವರದಿ ಶಿಫಾರಸು
ಗುರುವಾರ ರಾತ್ರಿ ಕಿಚ್ಚ ಸುದೀಪ್ ಮನೆಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಡಿನ್ನರ್ ಮುಗಿಸಿ ಕೆಲ ಹೊತ್ತು ಮಾತುಕತೆ ನಡೆಸಿದ್ದರು. ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಮಾತುಕತೆಯ ವಿಚಾರಗಳು ಲಭ್ಯವಾಗಿಲ್ಲ. ಸುದೀಪ್‌ರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿ, ಚುನಾವಣೆ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಟ ಸುದೀಪ್ ಮನೆಯಲ್ಲಿ ಡಿಕೆಶಿ ಡಿನ್ನರ್: ರಾಜಕೀಯ ವಲಯದಲ್ಲಿ ಗರಿಗೆದರಿದ ಕುತೂಹಲ