ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಟಿಯರಾದ ಮಾಳವಿಕಾ, ಸುಧಾರಾಣಿ, ಶೃತಿ ಮತ್ತು ತಾರಾ, ಭವ್ಯ ಅಂತಿಮ ದರ್ಶನ ಪಡೆದು, ಲೀಲಾವತಿ ಅವರನ್ನು ನೆನೆದರು.
ನಟಿ ಮಾಳವಿಕಾ ಮಾತನಾಡಿ, ನಮ್ಮ ಅಮ್ಮ ವಿಧಿವಶರಾಗಿದ್ದಾರೆ. ಮನಸ್ಸಿಗೆ ನೋವಾಗುತ್ತಿದೆ. ಹಲವು ದಶಕಗಳ ಪಯಣ ಅವರದ್ದು. ಅವರಿಗೆ ಅವರೇ ಸಾಟಿ. ಹಿರಿಯ ಜೀವಕ್ಕೆ ನಮಸ್ಕರಿಸಿದ್ದೇವೆ. ವಿನೋದ್ ಅವರಿಗೆ ಆ ದೇವರು ಶಕ್ತಿ ತುಂಬಲಿ ಎಂದು ಬಾವುಕರಾದರು.
ಲೀಲಾವತಿ ಎಂದರೆ ಕಲೆ ನೆನಪಾಗುತ್ತೆ- ಸುಧಾರಾಣಿ: ನಟಿ ಸುಧಾರಾಣಿ ಮಾತನಾಡಿ, ಲೀಲಾವತಿ ಅಮ್ಮ ಅಂದ ತಕ್ಷಣ ನಮಗೆ ಕಲೆ ನೆನಪಾಗುತ್ತದೆ. ವಿನೋದ್ ಮೇಲೆ ಬಹಳ ಪ್ರೀತಿ. ಅವರ ಸಿನಿಮಾದಲ್ಲಿ ನನಗೆ ನಟಿಸುವ ಅವಕಾಶ ಸಿಕ್ಕಿತ್ತು. ಪ್ರತೀ ವಾರ ಫೋನ್ ಮಾಡಿ ಸೀರಿಯಲ್ ಬಗ್ಗೆ ಮಾತನಾಡ್ತಿದ್ರು. ಅವರ ನಿಧನ ಬಹಳ ನೋವಿನ ಸಂಗತಿ. ಪ್ರಕೃತಿ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದರು. ಚಿತ್ರರಂಗಕ್ಕೆ ತುಂಬಲಾರದ ನಷ್ಟ. ವಿನೋದ್ ಅವರಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ತಿಳಿಸಿದರು.
ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ- ಶ್ರುತಿ: ನಟಿ ಶೃತಿ ಮಾತನಾಡಿ, ಜೀವನದಲ್ಲಿ ನಮಗೆ ಬರೋ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಅದನ್ನು ನಾವು ಲೀಲಾವತಿ ಅವರಿಂದ ಕಲಿತಿದ್ದೇವೆ. ಎಲ್ಲರಿಗೂ ನೋವು, ಕಷ್ಟ ಬರುತ್ತದೆ. 600 ಚಿತ್ರಗಳಲ್ಲಿ ಅಭಿನಯಿಸಿ, ಸಿಂಗಲ್ ಪೇರೆಂಟ್ ಆದ್ರು. ಆಯುಷ್ಯದ ಕೊನೆವರೆಗೂ ಮಾನಸಿಕವಾಗಿ ಚೆನ್ನಾಗಿದ್ರು. ಅವರೋರ್ವ ಹೃದಯವಂತೆಯಾಗಿದ್ದರು. ವಿನೋದ್ಗೆ ಲೀಲಾವತಿ ಪಾಠ ಹೇಳ್ತಿದ್ರು. ಅವೆಲ್ಲ ನಮಗೂ ಪಠ್ಯ ಪುಸ್ತಕ ಆಗ್ಬೇಕು. ಲೀಲಾವತಿ ಅವರು ನಮಗೆ ದೊಡ್ಡ ಆಸ್ತಿ. ತಾಯಿ ಮಗ ಬದುಕಿದ ರೀತಿ ನಮಗೆ ಆದರ್ಶ. ಕೃಷಿಯನ್ನು ಇಷ್ಟಪಟ್ಟು ಮಾಡ್ತಿದ್ರು. ಮನೆಗೆ ಊಟಕ್ಕೆ ಎಲ್ಲರನ್ನೂ ಕರೀತಿದ್ರು. ಭೂಮಿಯನ್ನು ಕಾಪಾಡೋದು ನಮ್ಮ ಕರ್ತವ್ಯ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.
ನಟಿ ತಾರಾ ಮಾತನಾಡಿ, ಲೀಲಾವತಿ ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ಹೆಚ್ಚು ಒಡನಾಟವಿರಲಿಲ್ಲ. ಅವರ ಜೊತೆ ನಟಿಸಲು ನನಗೆ ಸನ್ನಿವೇಶ ಸಿಕ್ಕಿಲ್ಲ. ವಿನೋದ್ ರಾಜ್ ಜೊತೆ ನಾನು ಆ್ಯಕ್ಟ್ ಮಾಡಿದ್ದೇನೆ. ವಿನೋದ್ ರಾಜ್ ಮಾತ್ರ ತಾಯಿ ಬಿಟ್ಟು ಬಂದಿರೋದನ್ನು ಎಲ್ಲೂ ನೋಡಿಲ್ಲ. ಹೀಗಾಗಿ ವಿನೋದ್ ರಾಜ್ ಬಗ್ಗೆ ನನಗೆ ನೋವಾಗ್ತಿದೆ. ಲೀಲಾವತಿ ಅವರು ಆದರ್ಶ ಜೀವನ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯವಾಗಿ ವಿನೋದ್ ರಾಜ್ಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ತಿಳಿಸಿದರು.
ಅಮ್ಮ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ; ಹಿರಿಯ ನಟಿ ಭವ್ಯ ಮಾತನಾಡಿ, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಸಾಗಿಸುತ್ತಿದ್ದರು. ವಿನೋದ್ ಮತ್ತು ಲೀಲಾವತಿ ಅಮ್ಮನವರ ಬಾಂಧವ್ಯ ಅಪರೂಪದ್ದು. ಹೊಸಬಾಳು ಸಿನಿಮಾವನ್ನು ಲೀಲಾವತಿ ಅಮ್ಮನೊಂದಿಗೆ ಮಾಡಿದ್ದೆ ಎಂದು ನೆನದ ಭವ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟಿಯರಾದ ಸುಧಾರಾಣಿ, ಶೃತಿ, ಮಾಳವಿಕಾ
ಹಿರಿಯ ನಟ ದ್ವಾರಕೀಶ್ ಮಾತನಾಡಿ, ಲೀಲಮ್ಮ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ. ಅವರು ಮಾಡಿದ ಪಾತ್ರ ಬಹಳ ಶ್ರೇಷ್ಠವಾದದ್ದು. ರಾಜ್ - ಲೀಲಾವತಿ ಜೋಡಿ ಅದ್ಭುತ. ಅವರಂತಹ ಜೋಡಿ ಚಿತ್ರರಂಗ ಕಂಡಿಲ್ಲ. ಉಳಿದಂತೆ ವಿನೋದ್ ಮತ್ತು ಲೀಲಾವತಿ ಅವರಂತಹ ತಾಯಿ ಮಗನ ಜೋಡಿಯನ್ನು ನಾನೆಂದೂ ನೋಡಿಲ್ಲ. ಯಾವತ್ತೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ ಎಂದು ತಿಳಿಸಿ ಬಾವುಕರಾದರು.
ಇದನ್ನೂ ಓದಿ: ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ನಟ ಕುಮಾರ್ ಗೋವಿಂದ್!
ಹಿರಿಯ ನಿರ್ದೇಶಕ ಎಸ್ ನಾರಾಯಣ್, ಹಿರಿಯ ಪೋಷಕ ನಟಿ ಲಕ್ಷ್ಮೀ ದೇವಿ, ಯುವ ನಟ ನವೀನ್ ಶಂಕರ್, ನಟಿ ಪಾವನ ಗೌಡ, ನಟ ರಮೇಶ್ ಭಟ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸೇರಿ ಅನೇಕ ಕಲಾವಿದರು ಲೀಲಾವತಿಯರ ಅಂತಿಮ ದರ್ಶನ ಪಡೆದರು. ಈ ಹಿಂದೆ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದ ಸಂದರ್ಭ ಲೀಲಾವತಿಯವರನ್ನು ಸುಧಾರಾಣಿ, ಶೃತಿ ಮತ್ತು ಮಾಳವಿಕಾ ಅವಿನಾಶ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.