ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಮಗನ ವಿಚಾರಣೆಯನ್ನ ಸಿಸಿಬಿ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ರಿಕ್ಕಿ ರೈ ತನಿಖಾಧಿಕಾರಿಗಳ ಎದುರು ಯಾವುದೇ ಡ್ರಗ್ಸ್ ಮಾಫಿಯಾದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಉತ್ತರ ನೀಡ್ತಿದ್ದಾನೆ ಎನ್ನಲಾಗ್ತಿದೆ. ಸಿಸಿಬಿಗೆ ಈಗಾಗಲೇ ಡ್ರಗ್ಸ್ ತನಿಖೆ ವೇಳೆ ಭೂಗತ ಲೋಕದ ಲಿಂಕ್ ಇರುವ ಮಾಹಿತಿ ಲಭಿಸಿದೆ. ಹೀಗಾಗಿ ಮಾಜಿ ಡಾನ್ ಮುತ್ತಪ್ಪ ರೈ ಮಗನ ವಿಚಾರಣೆ ನಡೆಸಲಾಗಿತ್ತು.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿಯನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸದ್ಯ ವಿಚಾರಣೆ ವೇಳೆ ರಿಕ್ಕಿ ಮಾದಕ ಲೋಕದ ವಿಚಾರವನ್ನ ಸರಿಯಾದ ರೀತಿ ಬಾಯಿ ಬಿಟ್ಟಿಲ್ಲ. ಆದರೆ ಸಿಸಿಬಿ ಟೆಕ್ನಿಕಲ್ ಟೀಂ ಕೆಲ ಮಾಹಿತಿಗಳನ್ನು ಕಲೆಹಾಕಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಎ6 ಆರೋಪಿ ಜೊತೆ ಬೆಂಗಳೂರು ಹಾಗೂ ರಿಕ್ಕಿ ರೈ ಮಾಲೀಕತ್ವದ ಹಾಸನ ಬಳಿಯ ರೆಸಾರ್ಟ್ನಲ್ಲಿ ಪಾರ್ಟಿಯಲ್ಲಿ ರಿಕ್ಕಿ ರೈ ಭಾಗಿಯಾಗಿದ್ದನಂತೆ. ಈ ಪಾರ್ಟಿಯಲ್ಲಿ ಕೆಲ ನಟಿಯರು, ನಟರು, ಉದ್ಯಮಿಗಳು, ರಾಜಾಕಾರಣಿಗಳ ಪುತ್ರರು, ಪೆಡ್ಲರ್ಗಳು ಭಾಗಿಯಾಗಿರುವುದು ತನಿಖೆ ವೇಳೆ ಸಿಸಿಬಿಗೆ ಗೊತ್ತಾಗಿದೆ.
ಆದ್ರೆ ರಿಕ್ಕಿ ರೈ ತನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ತಂದೆಯ ನಿಧನ ನಂತ್ರ ಕುಟುಂಬದ ಕೆಲ ಸಮಸ್ಯೆಗಳ ಬಗ್ಗೆ ನಾನು ಓಡಾಡ್ತಿದ್ದೆ. ನನಗೆ ಈ ಡ್ರಗ್ಸ್ ಮಾಫಿಯಾದ ಬಗ್ಗೆ ಮಾಹಿತಿ ಇಲ್ಲ. ಆದಿತ್ಯಾ ಆಳ್ವಾ ನನ್ನ ಬಾಲ್ಯ ಸ್ನೇಹಿತ. ಆದ್ರೆ ರೆಸಾರ್ಟ್ಗೆ ಹೋಗಿ ಆತ ಏನು ಮಾಡಿದ್ದಾನೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲವೆಂದು ಉತ್ತರ ನೀಡಿದ್ದಾನೆ.
ನಿನ್ನೆ ರಾತ್ರಿ 8 ಗಂಟೆವರೆಗೂ ವಿಚಾರಣೆ ನಡೆಸಿದ ಬಳಿಕ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಮತ್ತೆ ಕರೆಯುವುದಾಗಿ ತಿಳಿಸಿದ್ದಾರೆ. ರಿಕ್ಕಿ ರೈ ಮತ್ತೆ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದೆ. ರಿಕ್ಕಿ ರೈ ಒಂದು ವೇಳೆ ಸರಿಯಾದ ಉತ್ತರ ನೀಡಿಲ್ಲವೆಂದರೆ ಮುಂದಿನ ನಿರ್ಧಾರ ಸಿಸಿಬಿ ಹಿರಿಯಾಧಿಕಾರಿಗಳು ಕೈಗೊಳ್ಳಲಿದ್ದಾರೆ.