ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳೊಂದಿಗೆ ಗಲಾಟೆಯಾಗಿದ್ದು, ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಅನುಮತಿ ಮೇರೆಗೆ ಇಂದಿರಾನಗರ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ: ನಟಿ ಸಂಜನಾ ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಾಗಿದ್ದಾರೆ. ಪಾರ್ಕಿಂಗ್ ವಿಚಾರ ಪ್ರಶ್ನಿಸಿದ್ದಕ್ಕೆ ಅಕ್ಕಪಕ್ಕದವರು ಕೊಲೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಸೆಪ್ಟೆಂಬರ್ 12ರ ಸಂಜೆ ನಡೆದಿರುವ ಘಟನೆಯ ಕುರಿತು ನ್ಯಾಯಾಲಯದ ಅನುಮತಿ ಪಡೆದು ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ.
ಸಂಜನಾ ಗಲ್ರಾನಿ ನಿವಾಸದ ಪಕ್ಕದಲ್ಲಿಯೇ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಸುಮಾರು ಆರು ವಾಹನಗಳನ್ನು ಹೊಂದಿರುವ ರಾಜಣ್ಣ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಅಕ್ಕಪಕ್ಕದವರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, "ತಾವು ಇಲ್ಲಿ ನಲವತ್ತು ವರ್ಷಗಳಿಂದ ವಾಸಿಸುತ್ತಿರುವವರು. ತಮಗೆ ಇಷ್ಟ ಬಂದಂತೆ ವಾಹನಗಳನ್ನು ನಿಲ್ಲಿಸುತ್ತೇವೆ, ನಮ್ಮನ್ನು ಪ್ರಶ್ನೆ ಮಾಡಿದರೆ ಕೊಲೆ ಮಾಡ್ತೀವಿ" ಅಂತಾ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಸಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂಜನಾ ಬಗ್ಗೆ..: ಗಂಡ ಹೆಂಡತಿ ಚಿತ್ರದ ಮೂಲಕ ಚಂದನವನದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೆಟ್ ಮಾಡಿಕೊಂಡ ಬೋಲ್ಡ್ ನಟಿ ಸಂಜನಾ ಗಲ್ರಾನಿ. 18ನೇ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಬಂದು ಕನ್ನಡ ಹಾಗೂ ತೆಲುಗು ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜೊತೆಗೆ ತಮ್ಮ ಫೌಂಡೇಶನ್ ಹೆಸರಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಇದೇ ಸಮಯದಲ್ಲಿ ಗೆಳೆಯ ಅಜೀಜ್ ಪಾಷಾ ಜೊತೆ ಮದುವೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಡಾಕ್ಟರ್ ಮತ್ತು ಆ್ಯಕ್ಟರ್ ಶೈಲಿಯಲ್ಲಿ ಮಗನ ಫಸ್ಟ್ ಫೋಟೋಶೂಟ್ ಮಾಡಿಸಿದ ಸಂಜನಾ ಗಲ್ರಾನಿ