ಬೆಂಗಳೂರು: ಹಣ ಕೊಟ್ಟರೆ ಯಾವ ವಯಸ್ಸಿನವರಿಗಾದರೂ ಸರಿ, ಸರ್ಕಾರದಿಂದ ವೃದ್ಧಾಪ್ಯ ವೇತನ ಬರುವಂತೆ ಮಾಡಿಸಿಕೊಡುತ್ತಿದ್ದ ಮಧ್ಯವರ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರು ಇನ್ನೂರಕ್ಕೂ ಹೆಚ್ಚು ಜನ ನಕಲಿ ವೃದ್ಧಾಪ್ಯ ವೇತನ ಪಡೆಯುತ್ತಿರುವುದನ್ನು ಪತ್ತೆ ಹಚ್ಚಿ ಪ್ರಮುಖ ಮಧ್ಯವರ್ತಿ ಚತುರ್ ಎಂಬಾತನನ್ನು ಬಂಧಿಸಿದ್ದಾರೆ.
ವೃದ್ಧಾಪ್ಯ ವೇತನ ಪಡೆಯಲು ಮುಖ್ಯವಾಗಿ 60 ವರ್ಷ ವಯಸ್ಸಾಗಿರಬೇಕು. ಹಾಗೂ ಬಡತನ ರೇಖೆಗಿಂತ ಕೆಳಗಿರುವ ವೃದ್ಧರು ಮಾತ್ರ ಈ ಯೋಜನೆಗೆ ಅರ್ಹರು. ಇದಲ್ಲದೆ ಯೋಜನೆಯ ಲಾಭ ಪಡೆಯಲು ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಕಡ್ಡಾಯ. ಆದರೆ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡುತ್ತಿದ್ದ ಆರೋಪಿತ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿಗೆ ಆಧಾರ್ ಕಾರ್ಡ್ ಮಾಡಿ, ಸರ್ಕಾರದ ವೆಬ್ಸೈಟ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕಂಡ ಕಂಡವರು ಯೋಜನೆ ಲಾಭ ಪಡೆಯವಂತೆ ಮಾಡುತ್ತಿದ್ದನು.
ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಡಾ. ಎಸ್. ಡಿ. ಶರಣಪ್ಪ, ಅಧಿಕ ಹಣ ಪಡೆದು ಇ- ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ಬಳಿಕ ಪಿಡಿಎಫ್ ಎಡಿಟರ್ ಮೂಲಕ ವಯಸ್ಸನ್ನು ತಿರುಚಿ ವೃದ್ಧಾಪ್ಯ ವೇತನ ಸೇವೆಗೆ ಅರ್ಹವಾಗುವಂತೆ ಮಾಡುತ್ತಿದ್ದರು. ಓರ್ವರಿಗೆ ಈ ರೀತಿ ಸೌಲಭ್ಯ ಮಾಡಿಕೊಡಲು ಐದರಿಂದ ಹತ್ತು ಸಾವಿರ ರೂಪಾಯಿ ಹಣ ಪಡೆಯುತಿದ್ದರು. ಇಷ್ಟೆಲ್ಲವನ್ನೂ ನಕಲಿ ಮಾಡಿದರೂ ಸಹ ವೆಬ್ಸೈಟ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವಾಗ ಉಪತಹಶೀಲ್ದಾರ್ ಮಟ್ಟದ ಅಧಿಕಾರಿಯ ಡಿಜಿಟಲ್ ಬೆರಳಚ್ಚು ಅಗತ್ಯವಿದೆ. ಆದರೆ ಬೆರಳಚ್ಚು ಕೂಡಾ ಬಳಕೆ ಆಗುತ್ತಿರುವುದರಿಂದ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಸಹ ಇದೆ. ಆ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಿಸಿಬಿಗೆ ಬಂದ ಖಚಿತ ಮಾಹಿತಿ ಆಧಾರದಲ್ಲಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಕಡಿಮೆ ವಯಸ್ಸಿರುವವರಿಗೆ ವೃದ್ಧಾಪ್ಯ ವೇತನಗಳನ್ನು ಪ್ರೊಪೋಸಲ್ ಕೊಟ್ಟು ಮಂಜೂರು ಮಾಡಿಸುವಲ್ಲಿ ಕೆಲವು ಏಜೆಂಟ್ಗಳು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿ ಮೂರು ಕಡೆ ನಮ್ಮ ಸಿಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎರಡು ರಾಜಾಜಿನಗರ ಹಾಗೂ ಒಂದು ಕೆಂಗೇರಿ ತಹಶೀಲ್ದಾರ್ ವ್ಯಾಪ್ತಿಯಲ್ಲಿದೆ. ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ.
ವೃದ್ಧಾಪ್ಯ ವೇತನಕ್ಕೆ 60 ವರ್ಷ ಕಡ್ಡಾಯ. ಅದಕ್ಕಾಗಿ ಆಧಾರ್ ಕಾರ್ಡ್ಗಳಲ್ಲಿ ವಯಸ್ಸು ತಿದ್ದುಪಡಿ ಮಾಡಿ, 60 ಅಥವಾ 65 ವರ್ಷ ಮೇಲ್ಪಟ್ಟ ಬರುವ ರೀತಿ ಎಡಿಟ್ ಮಾಡಿ, ಉಳಿದ ದಾಖಲಾತಿಗಳೊಂದಿಗೆ ಅದನ್ನು ಕಂದಾಲ ಇಲಾಖೆಗೆ ಸಲ್ಲಿಸುತ್ತಾರೆ. ಮತ್ತೆ ಕೆಲವು ಮಂಜೂರಾತಿ ಕೂಡ ಪಡೆಯುವಲ್ಲಿ ಏಜೆಂಟ್ಗಳು ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಈಗಾಗಲೇ ನಾವು ಒಟ್ಟು 205 ಅಂತಹ ಫೈಲ್ಸ್ಗಳನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ. ರಾಜಾಜಿನಗರ ಠಾಣೆಯಿಂದ ವರ್ಗಾವಣೆಯಾದ ಪ್ರಕರಣದ ಅನ್ವಯ ಓರ್ವನನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ. ಎಸ್. ಡಿ. ಶರಣಪ್ಪ, ತಿಳಿಸಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ : ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ!