ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಸಂಪತ್ ರಾಜ್ ಪ್ರಮುಖ ಆರೋಪಿಯಾಗಿದ್ದಾರೆ. ಜವಾಬ್ದಾರಿಯುತ ನಾಗರಿಕನಾಗಿ ಬಂದು ಪೊಲೀಸರು ಮುಂದೆ ಮಾಜಿ ಮೇಯರ್ ಶರಣಾಗಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ ಜೆ ಹಳ್ಳಿ ಗಲಭೆ ಸಂಬಂಧ ಸಂಪತ್ ರಾಜ್ ಪ್ರಮುಖ ಆರೋಪಿಯಾಗಿದ್ದಾರೆ. ಆದ್ದರಿಂದ ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರ ಮುಂದೆ ಬಂದು ಶರಣಾಗುವುದು ಒಳಿತು, ಇಲ್ಲದಿದ್ದರೆ ನಮ್ಮ ಪೊಲೀಸರೇ ಅವರನ್ನು ಬಂಧಿಸುತ್ತಾರೆ. ಈ ಗಲಭೆಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಈ ಎಲ್ಲಾ ಕಾರಣಗಳನ್ನು ಹೊತ್ತು ಅವರಾಗಿಯೇ ಶರಣಾದರೆ ಒಳಿತು ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಂಪತ್ ರಾಜ್ಗೆ ವಿದೇಶಕ್ಕೆ ಪರಾರಿಯಾಗದಂತೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ. ಆದರೆ ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿರುವ ಕಾರಣ, ಅತೀ ಶೀಘ್ರದಲ್ಲೇ ಆತನನ್ನು ಬಂಧಿಸಲಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಹಿನ್ನೆಲೆ, 8 ಸಿಎಎನ್ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ ಅದಲ್ಲದೆ, ಎಕ್ಸ್ ಪರ್ಟ್ ಗಳ ಸಲಹೆಗಳನ್ನೂ ಸಹ ಪಡೆಯಲಾಗುತ್ತಿದೆ. ಪ್ರತಿವೋರ್ವ ಪೊಲೀಸರಿಗೂ ವಾಹನದ ಅವಶ್ಯಕತೆ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಾಹನ ನೀಡುವ ಯೋಜನೆ ಇದೆ. ಮುಂದಿನ ವರ್ಷದಲ್ಲಿ 300 ಜೀಪ್ ಗಳನ್ನು ಇಲಾಖೆಗೆ ಕೊಡುವುದಕ್ಕೆ ಸಿದ್ಧತೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.