ಬೆಂಗಳೂರು: ನಾವು ಕುಮಾರಸ್ವಾಮಿಗೆ ಯಾವುದೇ ಸಮಸ್ಯೆ ಮಾಡಲಿಲ್ಲ. ನಮ್ಮ ಎಲ್ಲಾ ನಾಯಕರು ಸೇರಿ ಸರ್ಕಾರ ರಚನೆಗೆ ಸಾಥ್ ಕೊಟ್ಟಿದ್ದೆವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿಯವರು ಇತ್ತೀಚಿಗೆ ಪ್ಲಾನ್ ಮಾಡಿ ಸಿದ್ದರಾಮಯ್ಯ ಮತ್ತು ತಂಡ ಮೈತ್ರಿ ಸರ್ಕಾರದಲ್ಲಿ ನನ್ನ ಹೆಸರನ್ನು ಹಾಳು ಮಾಡಿದರು ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಲೀಂ ಅಹ್ಮದ್, ನಾವು ಅವರಿಗೆ ಕಿರುಕುಳ ಕೊಟ್ಟಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು ಯೋಚನೆ ಮಾಡಿ ಹೇಳಿಕೆ ಕೊಡಬೇಕು ಎಂದರು.
ನಾವು ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ನಾವು ಐದು ವರ್ಷ ಒಳ್ಳೆಯ ಕೆಲಸ ಮಾಡಿದ್ದರೂ ಅಧಿಕಾರಕ್ಕೆ ಬರಲು ಆಗಲಿಲ್ಲ. ನಮ್ಮ ಕಾರ್ಯಕ್ರಮಗಳನ್ನು ಸರಿಯಾಗಿ ಪ್ರಚಾರ ಮಾಡಲು ಆಗಲಿಲ್ಲ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಲು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆವು ಎಂದು ವಿವರಿಸಿದರು.
ಇದನ್ನೂ ಓದಿ : 'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್ಡಿಕೆ ಹೀಗೆ ಹೇಳಿದ್ಯಾಕೆ?
ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಮೋಸ ಮಾಡಲಿಲ್ಲ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಲು ಮೈತ್ರಿ ಸರ್ಕಾರ ರಚನೆ ಮಾಡಿದರು. ಸರ್ಕಾರ ರಚನೆ ಆಗುವಾಗ ಮತ್ತು ಬೀಳುವಾಗ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಪಟ್ಟರು ಸರ್ಕಾರ ರಚನೆ ಮಾಡುವಾಗ ಹೈದ್ರಾಬಾದ್ ಮತ್ತು ಬೀಳುವಾಗ ಮುಂಬೈಗೆ ಹೋಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ವಿ ಎಂದರು.
ದೇವೇಗೌಡರು ಕೋಮುವಾದಿ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರೇ ಜೆಡಿಎಸ್ಗೆ ಪರಮೋಚ್ಚ ನಾಯಕರು. ಅವರು ಬಿಜೆಪಿ ಜೊತೆ ಹೋಗುವುದಿಲ್ಲ. ಹೋದರೆ ಸಿದ್ದಾಂತ ಬದಲಿಸಿದಂತೆ ಆಗುತ್ತದೆ ಎಂದರು.