ಬೆಂಗಳೂರು : ರಾಷ್ಟ್ರಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖ. ಇಂದು ಕಾಂಗ್ರೆಸ್ ಪಕ್ಷ ಕೂಡ ಯುವಕರಿಗೆ ಹೆಚ್ಚಿನ ಆದ್ಯತೆ, ಉತ್ತೇಜನ ನೀಡಿ ಪಕ್ಷ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವಾಗ ಒಂದು ಬೂತ್ನಲ್ಲಿ ಕನಿಷ್ಠ 5 ಮಂದಿ ಯುವಕರಿಗೆ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಯುವಕರಿಗೆ ಆದ್ಯತೆ ನೀಡುವ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ.
ಖುದ್ದು ಅವರೇ ಅಭಿಯಾನಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಹಿನ್ನೆಲೆ ಬರಲಾಗಿಲ್ಲ. ಮುಂದಿನ ದಿನಗಳಲ್ಲಿ ಯುವಕರೆಲ್ಲರೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ನೋಡುವ ಕನಸು ಕಾಣುತ್ತಿದ್ದಾರೆ. ಇದು ಸಾಕಾರಗೊಳ್ಳಬೇಕು ಎನ್ನುವುದು ನಮ್ಮ ಅಭಿಲಾಷೆ ಎಂದರು. ಪ್ರಧಾನಿ ನರೇಂದ್ರ ಮೋದಿ ವಾರ್ಷಿಕವಾಗಿ 2 ಕೋಟಿ ಮಂದಿಗೆ ಉದ್ಯೋಗ ಕೊಡಿಸುತ್ತೇನೆ ಎಂದಿದ್ದರು. ಈವರೆಗೂ 12 ಕೋಟಿ ಮಂದಿಗೆ ಉದ್ಯೋಗ ಕೊಡಿಸಬೇಕಿತ್ತು. ಆದರೆ, ಆ ವಿಚಾರದಲ್ಲಿ ಬಿಜೆಪಿ ಅನ್ಯಾಯ ಮಾಡಿದೆ. ಆ ಅನ್ಯಾಯವನ್ನು ನಾವು ಸರಿಪಡಿಸಲಿದ್ದೇವೆ ಎಂದರು.
ಎಐಸಿಸಿ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ಯಾದವ್ ಮಾತನಾಡಿ, ಯೂತ್ ಕಾಂಗ್ರೆಸ್ ಬಲವರ್ಧನೆಗೆ ನಿರ್ಧರಿಸಿದ್ದೇವೆ. ದೇಶಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡ್ತಿದ್ದೇವೆ. ಹೀಗಾಗಿ, ಕರ್ನಾಟಕದಿಂದಲೇ ಚಾಲನೆ ನೀಡ್ತಿದ್ದೇವೆ. 18ರಿಂದ 35ವರ್ಷದೊಳಗಿನವರು ಸದಸ್ಯರಾಗಬಹುದು. ಐವೈಸಿ ಅಂಡ್ರಾಯ್ಡ್ ಮೂಲಕ ಸದಸ್ಯತ್ವ ಪಡೆಯಬಹುದು. ಪ್ರತಿ ರಾಜ್ಯಗಳಲ್ಲೂ ಸದ್ಯತ್ವ ಅಭಿಯಾನ ನಡೆಯುತ್ತಿದೆ. ಪಕ್ಷದಲ್ಲೂ ಆಂತರಿಕ ಚುನಾವಣೆ ನಡೆಯಲಿದೆ. ಹೊಸ ಅಧ್ಯಕ್ಷರ ನೇಮಕಕ್ಕೆ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.
ಸದಸ್ಯತ್ವಕ್ಕೆ ಕ್ರೈಟಿರಿಯಾ ಬದಲಾವಣೆಯಿಲ್ಲ. ರಾಷ್ಟ್ರಮಟ್ಟದಲ್ಲಿ ಒಂದೇ ರೀತಿಯಾಗಿದೆ. ಈಗಾಗಲೇ ತೆಲಂಗಾಣದಲ್ಲಿ ಅಭಿಯಾನ ನಡೆದಿದೆ. 36 ವರ್ಷ ಮಿತಿಯನ್ನ ಎಲ್ಲೂ ಮಾಡಿಲ್ಲ. ಹಿಂದೆ ಗೈಡ್‌ಲೈನ್ಸ್ ಏನಿತ್ತು ಗೊತ್ತಿಲ್ಲ. ಈ ಬಾರಿಯಿಂದ ಒಂದೇ ಸ್ಟಾಂಡರ್ಡ್ ಮಾಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆನ್‌ಲೈನ್ ಮೂಲಕವೇ ಮತ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಎಲ್ಲಾ ರಾಜ್ಯಗಳಿಗೂ ಇದೇ ಅಪ್ಲೈ ಆಗಲಿದೆ. ಯಾವುದೋ ಉದ್ದೇಶಕ್ಕೆ ಇಲ್ಲಿ ವಯಸ್ಸಿನ ಬದಲಾವಣೆ ಮಾಡಿಲ್ಲ. ದೇಶವ್ಯಾಪ್ತಿ ಒಂದೇ ಮಾನದಂಡ ಅನುಸರಿಸಲಾಗುತ್ತೆ ಎಂದು ವಿವರಿಸಿದರು.
ಆಂಡ್ರಾಯ್ಡ್ ಆ್ಯಪ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಎಐಸಿಸಿ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಚಾಲನೆ ನೀಡಿದರು.