ಬೆಂಗಳೂರು: ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿಗಳು ಮತ್ತು ಪ್ರಯಾಣಿಕರ ಸುರಕ್ಷತೆ ಕಾಪಾಡುವ ಜವಾಬ್ದಾರಿ ವಾಹನಗಳ ಚಾಲಕರ ಮೇಲಿರಲಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಮಂಗಳೂರಿನ ಬಸ್ ನಿಲ್ದಾಣವೊಂದರ ಮುಂದೆ ನಿಂತಿದ್ದ ತಮಿಳುನಾಡಿನ ದಿನಗೂಲಿ ನೌಕರನಿಗೆ ಬಸ್‌ನ ಹಿಂಬದಿ ಚಕ್ರ ಹರಿದು ಗಾಯಗೊಂಡಿದ್ದ ಪ್ರಕರಣದಲ್ಲಿ ಪರಿಹಾರ ಕೋರಿ ವಜಾಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ನ್ಯಾಯಪೀಠ, ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಸಲಹೆ ನೀಡಿದೆ. ಪ್ರಕರಣದಲ್ಲಿ ರಸ್ತೆ ಅಪಘಾತಕ್ಕೊಳಗಾಗಿರುವ ಮುರುಗನ್ ಅವರ ಅರ್ಜಿಯನ್ನು ಹೊಸದಾಗಿ ಮತ್ತೊಮ್ಮ ಪರಿಶೀಲನೆಗೊಳಪಡಿಸಬೇಕು ಎಂದು ಮಂಗಳೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಿದೆ. ಅಲ್ಲದೇ, ಬಸ್ ನಂತಹ ಬೃಹತ್ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ತಿಳಿಸಿದೆ. ಜತೆಗೆ, ನ್ಯಾಯಾಧಿಕರಣದ ಆದೇಶವನ್ನು ರದ್ದು ಪಡಿಸಿ, ಪ್ರಕರಣದಲ್ಲಿನ ಪಕ್ಷಗಾರರು ಮಾರ್ಚ್ 27ರಂದು ನ್ಯಾಯಾಧಿಕರಣದ ಮುಂದೆ ಹಾಜರಾಗಬೇಕು ಸೂಕ್ತ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ತಮಿಳುನಾಡು ಮೂಲದ 45 ವರ್ಷ ವಯಸ್ಸಿನ ಮುರುಗನ್ ಅವರು 2017ರ ಜನವರಿ 19ರಂದು ಮಂಗಳೂರಿನ ಕಂಕನಾಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭಲ್ಲಿ ಅಜಾಗರೂಕತೆಯಿಂದ ವಾಹನ ಚಲಾವಣೆ ಮಾಡಿಕೊಂಡು ಬಂದ ಬಸ್ ಮುರುಗನ್ ಅವರ ಕಾಲಮೇಲೆ ಹರಿದು ಗಂಭೀರವಾಗಿ ಗಾಯಗೊಳಿಸಿತ್ತು.
2019ರ ಜುಲೈ 5 ರಂದು ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ಘಟನೆ ನಡೆದ ಸಂದರ್ಭದಲ್ಲಿ ಮುರುಗನ್ ಮದ್ಯ ಸೇವನೆ ಮಾಡಿದ್ದ. ಹೀಗಾಗಿ ಘಟನೆಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯ ಕಂಡು ಬಂದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು.
ಅಪಘಾತ ನಡೆದ ಬಸ್‌ನ ವಿಮೆ ಹೊಂದಿರುವ ಓರಿಯಂಟಲ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್‌ನ ಪರ ವಕೀಲರು, ಘಟನೆಯಲ್ಲಿ ಬಸ್ ಭಾಗಿಯಾಗಿರುವುದು ನಿಜ. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರಿಂದ ಮದ್ಯದ ವಾಸನೆ ಬರುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಇದನ್ನು ಪ್ರಶ್ನಿಸಿದ್ದ ಮುರುಗನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಮಾಸಿಕ 10 ಸಾವಿರ ರೂ.ಗಳನ್ನು ಮಾತ್ರ ದುಡಿಯುತ್ತಿದ್ದೇನೆ. ರಸ್ತೆ ಅಪಘಾತದಿಂದ ಕಾಲಿಗೆ ತೊಂದರೆಯಾಗಿದೆ. ಹೀಗಾಗಿ 3 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರನ ಬಳಿ ಮದ್ಯದ ವಾಸನೆ ಇತ್ತು ಎಂಬ ಕಾರಣಕ್ಕಾಗಿ ಮಧ್ಯ ಸೇವಿಸಿದ್ದರಿಂದ ಘಟನೆ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
ಪೊಲೀಸ್ ತನಿಖೆಯ ಪ್ರಕಾರ ಘಟನೆ ನಡೆದಿರುವುದಾಗಿ ಬಸ್ ಚಾಲಕ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಆರೋಪಿ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ 279 ಮತ್ತು 330 ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: ಚುನಾವಣಾ ಅಕ್ರಮಗಳಲ್ಲಿ ಪ್ರಕರಣ ದಾಖಲಿಸುವವರಿಗೆ ತರಬೇತಿ ನೀಡಿ: ಹೈಕೋರ್ಟ್