ಯಲಹಂಕ (ಬೆಂಗಳೂರು): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ನಿಟ್ಟಿನಲ್ಲಿ ಮತದಾರರನ್ನ ತಮ್ಮತ್ತ ಸೆಳೆಯಲು ಆಯಾ ಕ್ಷೇತ್ರದ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಇದೀಗ ಮತ ಸಮರದಲ್ಲಿ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಅವರಿಂದ ಕಿಡ್ನಾಪ್ ಹುನ್ನಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಅವರು ಇಂದು ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರು, ಮುನೇಗೌಡರು ಎಂಬುವವರು ಪ್ರಾರಂಭದಿಂದಲೂ ಕೂಡಾ ಕೆಟ್ಟ ಚಾಳಿಯನ್ನು ಹೊಂದಿದ್ದಾರೆ. ನಾನು ಯಾರಿಗೂ ಹೆದರಲ್ಲ ಎಂಬುದು, ದೌರ್ಜನ್ಯ ಎಂದು ಹೇಳುವುದು. ನನ್ನ ತಾಖತ್ ತೋರಿಸುತ್ತೇನೆ ಎಂಬುದು. ತನಿಖೆ ನಡೆಸುತ್ತೇನೆ ಎಂದಾಗ ನಮಗೆ ಈ ವ್ಯಕ್ತಿ ಸಭ್ಯ ವ್ಯಕ್ತಿ ಅಲ್ಲ ಅನಿಸಿತು. ಆದರೆ ನಾನು ಎಲ್ಲಾ ಮೀಟಿಂಗ್ನಲ್ಲೂ ಹೇಳಿದ್ದೆ, ಅವರು ಏನೇ ಮಾತನಾಡಿದರೂ ಕೂಡಾ ಗಲಭೆಗೆ ಅವಕಾಶ ಬೇಡ ಎಂದಿದ್ದೆ. ಈಗಾಗಲೇ ಇವರೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಸ್ಟೇಷನ್ನಲ್ಲಿ ಕಂಪ್ಲೆಂಟ್ ಮಾಡಿಸಿದ್ರು. ನಾನು ಏನೂ ಕೂಡಾ ಮಾತನಾಡಲು ಹೋಗಿಲ್ಲ. ಆದರೆ ನಿನ್ನೆ ಏಕಾಏಕಿ ಈ ರೀತಿ ದೃಶ್ಯ ಮಾಧ್ಯಮದಲ್ಲಿ ಬರುತ್ತಿದ್ದುದನ್ನು ನೋಡಿದೆ.
ಚುನಾವಣೆ ಪ್ರಚಾರ ಮುಗಿಸಿ ಬರುವಾಗ ಮುನೇಗೌಡರು ಸಂಚು ಮಾಡಿರುವುದು ಗೊತ್ತಾಗಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗು ಚರಣ್ ಅವರು ಸಂಚು ಮಾಡಿರೋದು ಕಳೆದ 4, 5 ನೇ ತಾರೀಖಿನಂದು ಅವರನ್ನೇ ಅವರೇ ಕಿಡ್ನ್ಯಾಪ್ ಮಾಡಿಸಿ ವಿಶ್ವನಾಥ್ ಅವರು ಕಿಡ್ನ್ಯಾಪ್ ಮಾಡಿದ್ದಾರೆಂದು ಆರೋಪಿಸೋಕೆ ಪ್ಲಾನ್ ಮಾಡಿದ್ರು. ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದಿದ್ರೆ, ಅವರು ಇವೆಲ್ಲಾ ಯೋಚನೆ ಮಾಡುತ್ತಿರಲಿಲ್ಲ. ಯಾವಾಗ ಅವರು ಹತಾಶರಾಗುತ್ತಾರೆ. ಆಗ ಅವರು ಈ ತರದ ಕೆಟ್ಟ ಯೋಚನೆಯನ್ನು ಮಾಡಿರುವುದು.
ನಮ್ಮ ಮೇಲೆ ಕೇಸ್ ಹಾಕಿಸುವ ಪ್ಲಾನ್: ಮೊದಲನೆಯದು, ಅವರ ಕಾರ್ಯಕರ್ತರಿಂದ ಅವರನ್ನೇ ಕಿಡ್ನ್ಯಾಪ್ ಮಾಡಿಸಿ ನಮ್ಮ ಮೇಲೆ ಕೇಸ್ ಹಾಕಿಸುವ ಪ್ಲಾನ್ ಮಾಡಿದ್ದರು. ಇಲ್ಲೆಲ್ಲಾ ಜನರಲ್ಲಿ ಗೊಂದಲ ಮಾಡಿ, ಹೋರಾಟ ಮಾಡಿ ಮತ ಸೆಳೆಯುವ ತಂತ್ರ ಮಾಡಿದ್ದರು.
ಬಿಜೆಪಿಯವರ ಮೇಲೆ ಆರೋಪಿಸುವ ತಂತ್ರ: ಎರಡನೆಯದು, ಇವತ್ತು ನಮ್ಮೂರಿನಲ್ಲಿ ಚುನಾವಣಾ ಪ್ರಚಾರ ಇತ್ತು. ಅಲ್ಲಿ ಅವರೇ ಕಾರ್ಯಕರ್ತರು 40-50 ಜನ ಬರುವಂತದ್ದು, ಅವರು ಅವರ ಮೇಲೆಯೇ ಹಲ್ಲೆ ಮಾಡುವಂತಹದ್ದು, ಮುನೇಗೌಡ ಪತ್ನಿ ಹಾಗೂ ಭಾವ, ಮೈದುನನ್ನು ಪ್ರಚಾರಕ್ಕೆ ಕಳುಹಿಸಿ ತಮ್ಮವರಿಂದಲೇ ಅವರಿಗೆ ಹಲ್ಲೆ ಮಾಡಿಸಿ ಅದನ್ನು ಬಿಜೆಪಿಗರ ತಲೆಗೆ ಕಟ್ಟುವ ಬಗ್ಗೆ ಮಾತುಕತೆ ನಡೆಸಿರುವುದು ಅವರ ತಂತ್ರವಾಗಿತ್ತು ಎಂದರು. ಮೂರನೇಯದು, ಒಂದು ಹುಡುಗಿಯಿಂದ ನನ್ನ ವಿರುದ್ಧವಾಗಿ ಹೇಳಿಕೆ ನೀಡಿಸಿ ಕೆಟ್ಟ ಅಭಿಪ್ರಾಯ ಬರುವಂತೆ ಹೇಳಿಸುವುದು ಅವರ ಪ್ಲಾನ್ ಆಗಿತ್ತು. ಈ ಬಗ್ಗೆ ಬಹಿರಂಗವಾಗಿ ತನಿಖೆ ಮಾಡಲು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದರು.
ವಿಡಿಯೋದಲ್ಲೇನಿದೆ?: ಮುನೇಗೌಡ ಹಾಗೂ ಚರಣ್ ಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಮೇ 5 ಅಥವಾ 6ರಂದು ಫೇಕ್ ಕಿಡ್ನ್ಯಾಪ್ ತಂತ್ರದ ಚರ್ಚೆ ನಡೆಸಲಾಗಿದೆ. ಅಪಹರಣದ ನಂತರ ಹೊಸೂರು ರಸ್ತೆಯ ಫಾರ್ಮ್ ಹೌಸ್ನಲ್ಲಿ ಎರಡ್ಮೂರು ದಿನ ಉಳಿದುಕೊಳ್ಳುವ ಯೋಜನೆಯ ಬಗ್ಗೆ ಮಾತುಕತೆಯಾಗಿದೆ. ಕಿಡ್ನಾಪ್ ಆದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುವುದೂ ಸೇರಿದಂತೆ ಹಲವು ತಂತ್ರಗಳ ಬಗ್ಗೆ ಮಾತನಾಡಿದ್ದಾರೆ. ಮೇ 7 ರಂದು ಜೆಡಿಎಸ್ ಸಮಾವೇಶಕ್ಕೆ ಗೈರಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ಲಾನ್ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ : ಯಲಹಂಕ ಜೆಡಿಎಸ್ ಅಭ್ಯರ್ಥಿಯಿಂದ ಸ್ವಯಂಪ್ರೇರಿತ ಅಪಹರಣ ಹೈಡ್ರಾಮಾ?