ಬೆಂಗಳೂರು: ಕೃಷ್ಣಾ ನದಿಯಲ್ಲಿ ಸಾಕಷ್ಟು ನೀರು ಬಂದಿದೆ. ವಿವಿಧ ಭಾಗದಲ್ಲಿ ನಿರೀಕ್ಷೆಗೂ ಮೀರಿದ ನೀರು ನದಿಯಲ್ಲಿ ಬಂದಿದೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ಅವಕಾಶ ಇತ್ತು. ಆದರೆ ಆಗಿಲ್ಲ. ನೀರಿನ ಸಂಗ್ರಹ ಹೆಚ್ಚಾಗುತ್ತಿತ್ತು. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆಗೆ ತೊಂದರೆ ಆದರೆ ನಾವು ಭಿಕ್ಷೆ ಬೇಡಬೇಕಾಗುತ್ತದೆ. ಆಲಮಟ್ಟಿ ಎತ್ತರ ಹೆಚ್ಚಿಸಿದರೆ ಅನುಕೂಲ ಎಂದು ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ಪರಸ್ಪರ ವಾಗ್ವಾದ;
ನೆರೆ ಸಂಬಂಧ ಗಂಭೀರ ಮಾತುಕತೆ ನಡೆಯುತ್ತಿದ್ದ ಸಂದರ್ಭ ಆಲಿಸಬೇಕಿದ್ದ ಸಚಿವ ಆರ್.ಅಶೋಕ್ ಅನುಪಸ್ಥಿತಿ ಹಾಗೂ ಉಳಿದ ಸಚಿವರ ಅನುಪಸ್ಥಿತಿ ಪ್ರತಿಪಕ್ಷದ ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು. ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಆಗ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಾನು, ನಾಗೇಶ್, ಸಿ.ಸಿ.ಪಾಟೀಲ್ ಇದ್ದೇವೆ. ಮೂವರೂ ಸಚಿವರು ನಿಮ್ಮ ಮಾತು ಕೇಳುತ್ತೇವೆ. ಮಾಹಿತಿ ನಮೂದು ಮಾಡಿಕೊಳ್ಳುತ್ತಿದ್ದೇವೆ. ಸಮಾಧಾನ ಮಾಡಿಕೊಳ್ಳಿ ಎಂದರು.
ಸರ್ಕಾರದ ಈ ನಿರ್ಲಕ್ಷ್ಯ ಎಷ್ಟು ಸರಿ?
ರಾಜ್ಯಕ್ಕೆ ದೇಶದಲ್ಲಿ ದೊಡ್ಡ ಹೆಸರಿದೆ. ದೇಶಕ್ಕೆ ಡಾಲರ್ ನೀಡುವ ರಾಜ್ಯ ಕರ್ನಾಟಕ. ದೇಶದ ಒಟ್ಟು ರಫ್ತಿನಲ್ಲಿ ಶೇ. 38ರಷ್ಟು ಪಾಲು ಹೊಂದಿದ್ದೇವೆ. ರಾಜ್ಯದ ಬಜೆಟ್ನ ಮೂರು ಪಟ್ಟು ಆದಾಯ ಐಟಿ ಕ್ಷೇತ್ರದಿಂದ ಬಂದಿದೆ. 5 ಸಾವಿರ ಕೋಟಿ ರೂ. ಆದಾಯ ಇದೆ. ದೇಶಕ್ಕೆ ಉತ್ತಮ ಹೆಸರು ಬರಲು ಕರ್ನಾಟಕ ಕಾರಣ. ಹಾಗಿರುವಾಗ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ. ಇಂತಹ ಶೋಚನೀಯ ಸ್ಥಿತಿ ಇರುವಾಗ ಸರ್ಕಾರದ ಈ ನಿರ್ಲಕ್ಷ್ಯ ಎಷ್ಟು ಸರಿ ಎಂದು ಎಸ್.ಆರ್.ಪಾಟೀಲ್ ಪ್ರಶ್ನಿಸಿದರು.
ಜನರ ಸಮಸ್ಯೆ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆಡಳಿತ ಪಕ್ಷದ ನಾಯಕರು ನಮ್ಮ ಬಳಿ ವಾದ ಮಾಡುತ್ತಿದ್ದಾರೆ. ಇಂದು ಪರಿಹಾರ ನೀಡಿದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ದಾನಿಗಳ ಹೃದಯ ಶ್ರೀಮಂತಿಕೆ ಕೊಂಡಾಡುತ್ತೇನೆ. ಆದರೆ ಇದು ಸರ್ಕಾರಕ್ಕೆ ಬಂದಿಲ್ಲ. ಶತಮಾನದಲ್ಲಿ ಕಾಣದ ದೊಡ್ಡ ವಿಪತ್ತು ಇದು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಪರಿಹಾರದ ಮೊತ್ತ ಐದರ ಬದಲು 10 ಲಕ್ಷ ನೀಡಬೇಕು ಎಂದರು.
ಅಧಿವೇಶನ ಕೂಡ ನಡೆಸಿಲ್ಲ:
ಸರ್ಕಾರ ನಮ್ಮ ಪರ ನಿಲ್ಲದಿದ್ದರೂ ಕನಿಷ್ಠ ಅಧಿವೇಶನ ನಡೆಸಿದ್ದರೆ ನಮ್ಮವರಿಗೆ ಕೊಂಚ ಧೈರ್ಯ ಬರುತ್ತಿತ್ತು. ನೀವು ಅಷ್ಟು ಕೆಲಸವನ್ನೂ ಮಾಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಒಟ್ಟು 22 ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಇದರಲ್ಲಿ ಬೆಳಗಾವಿ ಅತ್ಯಂತ ಹೆಚ್ಚು ಹಾನಿಗೀಡಾಗಿದೆ. ಅಧಿವೇಶನ ನಡೆಸಿದರೆ ಅಧಿಕಾರಿಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಆಗಲ್ಲ. ಅಧಿಕಾರಿಗಳು ಮಾಡಿದ ಮನವಿ ಹಿನ್ನೆಲೆ ಅಧಿವೇಶನ ನಡೆಸಲಿಲ್ಲ ಎಂದರು.
ಬಿಜೆಪಿ ಸದಸ್ಯ ಪ್ರಾಣೇಶ್, ಕಾಂಗ್ರೆಸ್ ಐವಾನ್ ಡಿಸೋಜಾ ಮಾತನಾಡಿದ ಸಂದರ್ಭ ಸಾಕಷ್ಟು ಸಾರಿ ಆಡಳಿತ, ಪ್ರತಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಸಭಾಪತಿಗಳ ಸ್ಥಾನದಲ್ಲಿದ್ದ ಕೆ.ಸಿ.ಕೊಂಡಯ್ಯ ಸದನವನ್ನು ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿದರು.