ಬೆಂಗಳೂರು: ಡಿವೈಎಸ್ಪಿಯಿಂದ ಎಸ್ಪಿಯಾಗಿ ಇತ್ತೀಚೆಗೆ ಮುಂಬಡ್ತಿ ಪಡೆದಿದ್ದ ಶೋಭಾ ಕಟಾವ್ಕರ್(53) ತಮ್ಮ ಬೆಂಗಳೂರು ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರದ ಐದನೇ ಹಂತದಲ್ಲಿರುವ ಅಪಾರ್ಟ್ಮೆಂಟ್ನ ಪ್ಲ್ಯಾಟ್ನಲ್ಲಿ ಶೋಭಾ ಅವರ ಶವ ಪತ್ತೆಯಾಗಿದೆ. ಬೆಂಗಳೂರಿನ ನಗರ ವಿಶೇಷ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶೋಭಾ ಕಟಾವ್ಕರ್ರನ್ನು ಇದೇ ತಿಂಗಳು 11 ರಂದು ಎಸ್ಪಿಯಾಗಿ ಮುಂಬಡ್ತಿ ನೀಡಿ ಹುಬ್ಬಳ್ಳಿಯ ಹೆಸ್ಕಾಂಗೆ ಸರ್ಕಾರ ವರ್ಗಾವಣೆ ಮಾಡಿತ್ತು.
ಸರ್ಕಾರದ ಪಾಲನೆಯಂತೆ ರಿಲೀವ್ ಆಗಿ ಇನ್ನಷ್ಟೇ ಹುಬ್ಬಳ್ಳಿ ಹೆಸ್ಕಾಂ ಕಚೇರಿಯಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಾಗಿತ್ತು. ಈ ನಡುವೆ ಶೋಭಾ ಅವರ ಕುಟುಂಬಸ್ಥರು ಕೆಲಸ ನಿಮಿತ್ತ ಹಾಸನಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ಇಂದು ಸಂಜೆಯಿಂದಲೂ ಮನೆಯ ಸದಸ್ಯರು ನಿರಂತರವಾಗಿ ಫೋನ್ ಮಾಡಿದರೂ ರಿಸೀವ್ ಮಾಡದ ಪರಿಣಾಮ ಸೆಕ್ಯೂರಿಟಿ ಗಾರ್ಡ್ಗೆ ಮನೆಗೆ ಹೋಗಿ ಪರಿಶೀಲಿಸುವಂತೆ ಹೇಳಿದ್ದಾರೆ. ಮನೆಗೆ ಹೋಗಿ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೋಭಾ ಅವರಿಗೆ ಹೃದಯಾಘಾತ ವಾಗಿದೆ ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಅನುಮಾನಸ್ಪಾದವಾಗಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಪರೀಕ್ಷೆ ಬಳಿಕ ಸಾವಿಗೆ ನಿಖರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.