ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವಂತೆ ರೂಪ್ಸಾ ಸಂಘಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದಿದೆ.
ಕೋವಿಡ್-19 ಮೊದಲ ಹಾಗೂ 2ನೇಯ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಅನೇಕ ಜನರು ತಮ್ಮ ಪ್ರಾಣದ ಹಂಗು ತೊರೆದು ದುಡಿದಿದ್ದಾರೆ. ಅನೇಕರು ತಮ್ಮ ಪ್ರಾಣವನ್ನೂ ಕಳೆದು ಕೊಂಡಿದ್ದಾರೆ. ರಾಜ್ಯ ಸರ್ಕಾರ ಇವರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮೃತರ ಪರಿವಾರಕ್ಕೆ, ಸಾಂತ್ವನದ ಜತೆಗೆ ಅನುದಾನ ಘೋಷಿಸಿ ಮಾನವೀಯತೆ ಮೆರೆದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅದೇ ರೀತಿ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರನ್ನೂ ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳಲಾಯಿತು. ಅವರನ್ನೂ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿರುವುದು ಸೂಕ್ತ ನಿರ್ಧಾರ. ಆ ಸಮಯದಲ್ಲಿ ಸುಮಾರು 425ಕ್ಕಿಂತಲೂ ಹೆಚ್ಚು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದು, ಅವರನ್ನೇ ಅವಲಂಬಿಸಿದ ಅವರ ಕುಟುಂಬಗಳು ಅಕ್ಷರಶಃ ನಿರ್ಗತಿಕರಾಗಿದ್ದಾರೆ.
ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜ.15ರಂದು 'ಮೃತ ಶಿಕ್ಷಕರ ಮಾಹಿತಿಯನ್ನು ಕೇಳಿದ್ದೇವೆ ಅವರಿಗೆ ಶೀಘ್ರದಲ್ಲೇ ಅನುದಾನ ನೀಡಲಾಗುವುದು' ಎಂದು ಹೇಳಿದ್ದರು. ಆದರೆ, ಆ ಕುಟುಂಬಗಳು ಈಗಲೂ ಅನುದಾನದ ನಿರೀಕ್ಷೆಯಲ್ಲಿವೆ. ಈ ವಿಚಾರ ಕುರಿತು ಹಲವು ಬಾರಿ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದೆ.
ಆದರೆ, ಕಳೆದ ಒಂದು ವರ್ಷದಿಂದಲೂ ಪರಿಹಾರ ಸಿಗದೇ ಕುಟಂಬಗಳು ನಿರಾಶ್ರಿತರಾಗಿರುವುದು ದುರದೃಷ್ಟಕರ ಸಂಗತಿ. ಹೀಗಾಗಿ, ಕೋವಿಡ್ ವಾರಿಯರ್ಸ್ಗಳಿಗೆ ನಿಗದಿಪಡಿಸಿದ ಪರಿಹಾರವನ್ನು ತಕ್ಷಣ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಹೋಮ್ ಐಸೋಲೇಷನ್ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ